ಬೆಂಗಳೂರು: ಅಸಾನಿ ಚಂಡಮಾರುತದ ಪರಿಣಾಮದಿಂದ ನಗರದಲ್ಲಿ ಬೇಸಿಗೆ ಸಮಯದಲ್ಲೂ ಮೈ ಕೊರೆಯುವ ಚಳಿಯ ಅನುಭವ ಉಂಟಾಗುತ್ತಿದೆ. ಇದಕ್ಕೆ ಕಾರಣ ಉಷ್ಣಾಂಶ ಅತ್ಯಂತ ಕಡಿಮೆಯಾಗಿರುವುದು. ಇಂದು ನಗರದಲ್ಲಿ ಗರಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಕಳೆದ 50 ವರ್ಷಗಳಲ್ಲಿ ಅತ್ಯಂತ ಕಡಿಮೆ ಉಷ್ಣಾಂಶ ಇದಾಗಿದೆ ಎಂದು ಹವಾಮಾನ ಇಲಾಖೆಯ ತಜ್ಞ ಸದಾನಂದ ಅಡಿಗ ತಿಳಿಸಿದ್ದಾರೆ. 1972ರ ನಂತರ ಇದೇ ಮೊದಲು ಇಷ್ಟು ಪ್ರಮಾಣದ ಚಳಿ ವಾತಾವರಣ ಇದ್ದು, ಇದು ಸಾಮಾನ್ಯಕ್ಕಿಂತ 10 ಡಿಗ್ರಿ ಕಡಿಮೆ ಉಷ್ಣಾಂಶ ಎಂದು ಹೇಳಿದ್ದಾರೆ.
ಮಳೆ :ಇಂದು ಮತ್ತು ನಾಳೆಯೂ ನಗರದಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದೆ. ಮಳೆ ಹಾಗೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಪಶ್ಚಿಮ ಘಟ್ಟದ ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ಇದೆ.