ಬೆಂಗಳೂರು: ಐಟಿ ಸಿಟಿ ಬೆಂಗಳೂರಿನಲ್ಲಿ ಕಳೆದ ಎರಡು ತಿಂಗಳಲ್ಲಿ ಹೃದಯಾಘಾತ ಸಂಖ್ಯೆಯಲ್ಲಿ ಶೇ.30 ರಷ್ಟು ಹೆಚ್ಚಳ ಕಂಡು ಬಂದಿದೆ ಎಂದು ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ.
ವಿಶ್ವ ಹೃದಯ ದಿನ ಪ್ರಯುಕ್ತ ಈ ಬಗ್ಗೆ ಮಾಹಿತಿ ನೀಡಿರುವ ಸಕ್ರಾ ವಲ್ರ್ಡ್ ಆಸ್ಪತ್ರೆಯ ಇಂಟರ್ವೆನ್ಷನಲ್ ಕಾರ್ಡಿಯೋಲಾಜಿಯ ಮುಖ್ಯಸ್ಥರಾದ ಡಾ.ಶ್ರೀಕಾಂತ್ ಶೆಟ್ಟಿ, ಲಾಕ್ಡೌನ್ ನಿಂದ ಮಾನಸಿಕ ಒತ್ತಡ, ಆರ್ಥಿಕ ಕಷ್ಟಗಳು, ಜೀವನಶೈಲಿಯಲ್ಲಿ ಆಗಿರುವ ಬದಲಾವಣೆ ಮತ್ತು ಕೆಟ್ಟ ಅಥವಾ ಅಸಮರ್ಪಕವಾದ ಆಹಾರ ಪದ್ಧತಿಗಳು ಈ ಹೃದಯಾಘಾತದ ಪ್ರಮಾಣ ಹೆಚ್ಚಲು ಪ್ರಮುಖ ಕಾರಣಗಳಾಗಿವೆ. ಅನೇಕ ಹೃದಯಾಘಾತಕ್ಕೆ ಒಳಗಾದವರು ಕೋವಿಡ್ ಸೋಂಕಿನ ಆತಂಕದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಹೋಗುವುದು ತಡವಾಗುತ್ತಿದೆ ಮತ್ತು ಸಕಾಲದಲ್ಲಿ ಚಿಕಿತ್ಸೆ ಪಡೆದುಕೊಳ್ಳದೇ ಇರುವುದರಿಂದ ಈ ರೋಗಿಗಳು ಗುಣಮುಖರಾಗುವ ಸಂಕೀರ್ಣತೆ ಅಂದರೆ, ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ತಿಳಿಸಿದರು.
ಲಾಕ್ಡೌನ್ನ ಆರಂಭಿಕ ತಿಂಗಳುಗಳಲ್ಲಿ ಹೃದಯಾಘಾತದ ರೋಗಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿತ್ತು. ಮನೆಯಲ್ಲೇ ಇದ್ದುದರಿಂದ ಒತ್ತಡದ ಮಟ್ಟಗಳಲ್ಲಿ ಇಳಿಕೆಯಾಗಿದ್ದು, ಹೆಚ್ಚು ವಿಶ್ರಾಂತಿ ಸಿಕ್ಕಿದ್ದರಿಂದ ಹೃದಯಾಘಾತದ ಪ್ರಮಾಣದಲ್ಲಿ ಕಡಿಮೆಯಾಗಿತ್ತು. ಕೋವಿಡ್ ಆತಂಕದಿಂದ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರದಿರುವುದು ಕಾರಣವಾಗಿತ್ತು. ಸೂಕ್ತ ಚಿಕಿತ್ಸೆ ದೊರೆಯದಿರುವುದರಿಂದ ಮನೆಯಲ್ಲೇ ಸಾವನ್ನಪ್ಪುವ ಪ್ರಕರಣಗಳನ್ನು ನಾವು ನೋಡಿದ್ದೇವೆ.
ಆದರೆ, ಕಾಲ ಚಕ್ರ ತಿರುಗಿದೆ. ಅನೇಕರಲ್ಲಿ ಮಾನಸಿಕ ಒತ್ತಡ, ಹತಾಶೆ ಮತ್ತು ಆರ್ಥಿಕ ಸಂಕಷ್ಟದಿಂದ, ಉದ್ಯೋಗ ನಷ್ಟ, ವೇತನ ಕಡಿತ, ಅನಿಯಮಿತವಾದ ಕೆಲಸದ ಸಮಯ ಸೇರಿದಂತೆ ಮತ್ತಿತರೆ ಅಭದ್ರತೆಗಳು ಹೆಚ್ಚಾಗತೊಡಗಿವೆ. ಇದರ ಪರಿಣಾಮ ಸಾಂಕ್ರಾಮಿಕದ ಈ ಹಂತದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಇದಕ್ಕೆ ಪ್ರಮುಖ ಕಾರಣ ಸಾಂಕ್ರಾಮಿಕ ಸಂಬಂಧಿತ ಒತ್ತಡ ಕಾರಣ ಎಂದು ಹೇಳಿದ್ದಾರೆ.
ಸಕ್ರ ಆಸ್ಪತ್ರೆಯಲ್ಲಿ ಹೃದಯಾಘಾತಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳವಾಗುವುದನ್ನು ಗಮನಿಸಿದ್ದೇವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ಹೃದಯಾಘಾತಕ್ಕೆ ತುತ್ತಾದವರ ಪ್ರಮಾಣದಲ್ಲಿ ಶೇ.30 ರಷ್ಟು ಹೆಚ್ಚಳ ಕಂಡುಬಂದಿದೆ. ಆದರೆ, ರೋಗಿಗಳು ಸೂಕ್ತ ಚಿಕಿತ್ಸೆ ಪಡೆದುಕೊಳ್ಳಲು ಹಿಂದೇಟು ಹಾಕುತ್ತಿದ್ದರೂ, ತುರ್ತು ಚಿಕಿತ್ಸಾ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆ ಹೆಚ್ಚಳವಾಗಿದೆ ಎಂದು ಅವರು ಹೇಳಿದರು.
ಈಗಾಗಲೇ ಹೃದಯ ಸಂಬಂಧಿ ರೋಗಗಳಿಂದ ಬಳಲುತ್ತಿರುವ ರೋಗಿಗಳು ಕೋವಿಡ್ ಸೋಂಕಿನಿಂದಾಗಿ ಹೆಚ್ಚು ಅಪಾಯಕ್ಕೆ ಸಿಲುಕುತ್ತಾರೆ. ಇವರಲ್ಲಿ ಸಾವನ್ನಪ್ಪುವ ಅಪಾಯವೂ ಬಂದೊದಗಬಹುದು. ಈ ಸೋಂಕು ಹಲವು ಮಾರ್ಗಗಳಲ್ಲಿ ಪರಿಣಾಮ ಬೀರಬಹುದು.
- ಒಮ್ಮೆ ಶ್ವಾಸಕೋಶ ಗಂಭೀರವಾಗಿ ಬಾಧಿತವಾದರೆ ಆಮ್ಲಜನಕದ ಮಟ್ಟ ಕೆಳಮಟ್ಟಕ್ಕೆ ಇಳಿಯುತ್ತದೆ. ಆಗ ಹೃದಯದ ಕಾರ್ಯದಲ್ಲಿ ಕುಂಠಿತವಾಗುತ್ತದೆ.
- ಈ ಸೋಂಕು ಕಡಿಮೆ ರಕ್ತದೊತ್ತಡದ ಸಮಸ್ಯೆಗೆ ಕಾರಣವಾಗುತ್ತದೆ. ಇದರಿಂದ ಹೃದಯದ ಮೇಲೆ ಪರಿಣಾಮ ಬೀರುತ್ತದೆ.
- ಹೃದಯಕ್ಕೆ ಸಂಬಂಧಿಸಿದಂತೆ ಈ ಸೋಂಕು ಗಂಭೀರವಾದ ಪರಿಣಾಮವನ್ನು ಉಂಟುಮಾಡುತ್ತದೆ.
- ಈ ಕೋವಿಡ್ ಸೋಂಕು ದೇಹದ ಅಪಧಮನಿಗಳು ಮತ್ತು ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವಂತೆ ಮಾಡುತ್ತದೆ.