ಬೆಂಗಳೂರು: ಕೊರೊನಾ ವೈರಸ್ ಹರಡುವಿಕೆ ತನ್ನ ವೇಗವನ್ನು ಹೆಚ್ಚಿಸಿಕೊಂಡಿದ್ದು, ಸಿಕ್ಕಸಿಕ್ಕವರನ್ನೆಲ್ಲ ತನ್ನವರನ್ನಾಗಿ ಮಾಡಿಕೊಳ್ಳುತ್ತಾ ಮುಂದೆ ಸಾಗುತ್ತಿದೆ. ಆದರೂ ಜನರು ಎದೆಗುಂದದೆ ಅದರ ವಿರುದ್ಧ ಕಾದಾಡಿ ಗೆದ್ದು ಬರುತ್ತಿದ್ದಾರೆ. ಗುಣಮಟ್ಟದ ಔಷಧದ ಜೊತೆಗೆ, ಆಹಾರವನ್ನು ಸಹ ಪೂರೈಸುತ್ತಿರುವುದೇ ಅದಕ್ಕೆ ಕಾರಣ.
ಈ ಹಿಂದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗೆ ಊಟ ಮತ್ತು ಉಪಹಾರವನ್ನು ಸಮಾಜ ಕಲ್ಯಾಣ ಇಲಾಖೆ ಒದಗಿಸುತ್ತಿತ್ತು. ಈಗ ಊಟೋಪಚಾರವನ್ನು ಟೆಂಡರ್ ಪಡೆದಿರುವ ಗುತ್ತಿಗೆದಾರರು ಪೂರೈಸುತ್ತಿದ್ದಾರೆ. ಇನ್ನು ಹೋಮ್ ಐಸೊಲೇಷನ್ನಲ್ಲಿ ಇರುವವರಿಗೆ ಊಟೋಪಚಾರದಲ್ಲಿ ಯಾವುದೇ ಸಮಸ್ಯೆಯಾಗುವುದಿಲ್ಲ. ಅವರಿಗೆ ಬೇಕಾದ ಮೆಡಿಸಿನ್ ಮತ್ತು ಮಾಸ್ಕ್ ಸೇರಿದಂತೆ ಅಗತ್ಯ ವಸ್ತುಗಳನ್ನು ಜಿಲ್ಲಾಡಳಿತ ಪೂರೈಕೆ ಮಾಡುತ್ತಿದೆ. ಒಂದು ವೇಳೆ ಅವರಿಗೆ ಮಾಸ್ಕ್, ಮಾತ್ರೆಗಳು ಸಿಗದಿದ್ದರೆ ಆಶಾ ಕಾರ್ಯಕರ್ತೆಯರ ಮೂಲಕ ಕೇಳಿ ಪಡೆಯಬಹುದು.