ಬೆಂಗಳೂರು :ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ಇಳಿಕೆ ಆಗುತ್ತಿದೆ. ಇತ್ತಕಡೆ ಮಹಾರಾಷ್ಟ್ರ, ದೆಹಲಿ, ಹರಿಯಾಣದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದನ್ನು ರದ್ದು ಮಾಡಲಾಗಿದೆ. ಈ ಬಗ್ಗೆ ಕರ್ನಾಟಕದಲ್ಲೂ ಚರ್ಚೆ ನಡೆಯುತ್ತಿದೆ. ಈ ಕುರಿತು ಆರೋಗ್ಯ ಸಚಿವ ಕೆ. ಸುಧಾಕರ್ ಪ್ರತಿಕ್ರಿಯಿಸಿದ್ದಾರೆ. ಈಗಾಗಲೇ ಮೂರು ರಾಜ್ಯಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದನ್ನು ರದ್ದು ಮಾಡಲಾಗಿದೆ. ಈ ನಡುವೆ ಕೋವಿಡ್ ನಾಲ್ಕನೆ ಅಲೆ ಬಗ್ಗೆಯೂ ಚರ್ಚೆ ನಡೆಯುತ್ತಿದೆ ಎಂದಿದ್ದಾರೆ.
ಆದರೆ, ನಮ್ಮಲ್ಲಿ ಶೇ.90ರಷ್ಟು ಜನ ಮಾಸ್ಕ್ ಧರಿಸುತ್ತಿಲ್ಲ. ಈ ಬಗ್ಗೆ ನಾವು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಮಾಸ್ಕ್ ರದ್ದತಿ ಮಾಡುವ ಬಗ್ಗೆ ನಾವೇನೂ ಆದೇಶ ಮಾಡಿಲ್ಲ. ಇನ್ನು ರಾಜ್ಯದಲ್ಲೂ ಮಾಸ್ಕ್ ಕಡ್ಡಾಯ ರದ್ದತಿ ವಿಚಾರವಾಗಿ ಸಮಾಲೋಚನೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಈ ಬಗ್ಗೆ ಕೋವಿಡ್ ಟಾಸ್ಕ್ ಪೋರ್ಸ್ ಮತ್ತು ಸಿಎಂ ಜೊತೆ ಚರ್ಚೆ ನಡೆಸಿ ಸದ್ಯದಲ್ಲೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಒಮಿಕ್ರಾನ್ ಹೊಸತಳಿ :ಇನ್ನು ಒಮಿಕ್ರಾನ್ ಹೊಸತಳಿ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. ಈ ಬಗ್ಗೆ ನಾವು ಅನೇಕರ ಬಳಿ ಸಂಪರ್ಕದಲ್ಲಿ ಇದ್ದೇವೆ. ಈಗಾಗಲೇ ವಿದೇಶದಿಂದ ಆಗಮಿಸುತ್ತಿರುವವರಲ್ಲಿ ಸೋಂಕು ಏನಾದರೂ ಕಂಡು ಬಂದರೆ ಅಂತಹವರನ್ನು ಪರೀಕ್ಷಿಸಲು ಜಿನೋಮಿಕ್ ಸ್ವೀಕ್ವೆನ್ಸ್ ಟೆಸ್ಟ್‌ಗೂ ಕಳುಹಿಸಲಾಗುತ್ತಿದೆ. ಹೊಸ ತಳಿ ಪತ್ತೆ ಕುರಿತು ಐಸಿಎಂಆರ್ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಹಲಾಲ್ ಸರ್ಟಿಫಿಕೇಟ್ ನಮ್ಮ ವ್ಯಾಪ್ತಿಗೆ ಬರಲ್ಲ : ಇನ್ನು ಹಲಾಲ್ ಸರ್ಟಿಫಿಕೇಟ್ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಚಿವರು, ಹಲಾಲ್ ಪ್ರಮಾಣೀಕರಣ ನಮ್ಮ ಇಲಾಖೆಯ ವ್ಯಾಪ್ತಿಗೆ ಬರಲ್ಲ. ಇದನ್ನು ಸಂಬಂಧಪಟ್ಟ ಕಮಿಷನರ್‌ಗಳು ನಿರ್ಧಾರ ಮಾಡುವುದು. ಆರೋಗ್ಯ ಇಲಾಖೆ ವ್ಯಾಪ್ತಿಗೆ ಹಲಾಲ್ ಸರ್ಟಿಫಿಕೇಟ್ ಕೊಡುವುದು ಸಂಬಂಧಪಡಲ್ಲ. ನಾವು ಆಹಾರ ಸುರಕ್ಷತೆಯ ಬಗ್ಗೆ ಮಾತ್ರ ಪ್ರಮಾಣ ಪತ್ರವನ್ನು ನೀಡುತ್ತೇವೆ. ನಮ್ಮ ಇಲಾಖೆ ಆಹಾರ ಪದಾರ್ಥಗಳ ಗುಣಮಟ್ಟಕ್ಕೆ ಮಾತ್ರ ಪ್ರಮಾಣಪತ್ರ ಕೊಡುತ್ತದೆ. ಹಲಾಲ್ ಪ್ರಮಾಣ ಪತ್ರಕ್ಕೂ, ನಮಗೂ ಸಂಬಂಧವಿಲ್ಲ ಎಂದು ಇದೇ ವೇಳೆ ಹೇಳಿದ್ದಾರೆ.
ಓದಿ :ಭಯೋತ್ಪಾದಕರ ಅಡಗುತಾಣ ಭೇದಿಸಿದ ಭದ್ರತಾ ಪಡೆ: ಅಪಾರ ಶಸ್ತ್ರಾಸ್ತ್ರ, ಮದ್ದುಗುಂಡು ವಶ