ಬೆಂಗಳೂರು: ಕೊರೊನಾ ಮೂರನೇ ಅಲೆ ಬರುವುದನ್ನು ತಡೆಯಲು ದೊಡ್ಡಮಟ್ಟದ ಸಿದ್ಧತೆಯಾಗಬೇಕು. ಯಾವುದೋ ಹಂತದಲ್ಲಿ ನಾವು ಸ್ವಲ್ಪ ಪ್ರಮಾಣದ ತ್ಯಾಗಕ್ಕೆ ರೆಡಿಯಾಗಬೇಕು. ಸಂಪೂರ್ಣ 14 ದಿನ ಚೈನ್ ಬ್ರೇಕ್ ಹಾಕಲು ಈ ಕಠಿಣ ಕ್ರಮ ಅನಿವಾರ್ಯವಾಗಿದ್ದು, ಸರ್ಕಾರದ ಜೊತೆ ಜನರು ಸಹಕರಿಸುವಂತೆ ಆರೋಗ್ಯ ಸಚಿವ ಡಾ. ಸುಧಾಕರ್ ಮನವಿ ಮಾಡಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ರಾತ್ರಿಯಿಂದ 14 ದಿನ ನೂತನ ಮಾರ್ಗಸೂಚಿ ಜಾರಿಯಲ್ಲಿರಲಿದೆ. ಅಗತ್ಯ ಸೇವೆಗೆ ಕಾಲಮಿತಿಯ ಅವಕಾಶ ಕಲ್ಪಿಸಿದ್ದು, ಜನರು ಅಗತ್ಯ ವಸ್ತುಗಳ ಬಗ್ಗೆ ಆತಂಕಕ್ಕೆ ಸಿಲುಕಬೇಕಿಲ್ಲ. ಹೋಟೆಲ್ಗಳಲ್ಲಿ ಪಾರ್ಸಲ್ ಸೇವೆ ಇರಲಿದೆ. ಆದರೆ, ಜನರ ಅನಗತ್ಯ ಓಡಾಟಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಿದ್ದು, ಸಾರ್ವಜನಿಕ ಸಾರಿಗೆ ಸ್ಥಗಿತವಾಗಿರಲಿದೆ. ಜನರಿಗೆ ಸ್ವಲ್ಪ ಕಷ್ಟವಾದರೂ ಕೊರೊನಾ ಎರಡನೇ ಅಲೆಯ ಚೈನ್ ಬ್ರೇಕ್ ಮಾಡಲು ಇದು ಅನಿವಾರ್ಯ ಎಂದರು.
ಲಸಿಕೆ ಕೊಡುವುದರ ಬಗ್ಗೆ ಅನೇಕ ಊಹಾಪೂಹಗಳಿವೆ:
ಮಾರ್ಗಸೂಚಿ ಬಿಡುಗಡೆ ಬಳಿಕ ಚಟುವಟಿಕೆಗಳಿಗೆ ನಿರ್ಬಂಧ ಇದೆ. ಹಾಗಾಗಿ, ಲಸಿಕೆ ಸಿಗಲ್ಲ ಅಂತ ಕೆಲವರು ಸುಳ್ಳು ಹೇಳಿದ್ದಾರೆ. ಅಗತ್ಯ ಸೇವೆಗಳು ಇರಲಿವೆ. ಲಸಿಕೆ ಪಡೆಯೋದೆಲ್ಲವೂ ಅಗತ್ಯ ಸೇವೆಗೆ ಒಳಪಡಲಿದೆ. ಲಸಿಕೆ ಕೊಡುವುದನ್ನ ಮುಂದುವರೆಸುತ್ತೇವೆ. ರಿಜಿಸ್ಟರ್ ಮಾಡಿಕೊಂಡು ಕೊಡುತ್ತೇವೆ. ಲಸಿಕೆ ಒಂದೇ ನಮಗೆ ಕೊರೊನಾದಿಂದ ತಪ್ಪಿಸಿಕೊಳ್ಳಲು ಇರುವ ಉಪಾಯವಾಗಿದ್ದು, ಪ್ರತಿಯೊಬ್ಬರೂ ಎರಡು ಡೋಸ್ ಲಸಿಕೆ ಪಡೆಯಿರಿ ಎಂದು ಮನವಿ ಮಾಡಿದರು.