ಬೆಂಗಳೂರು: ನಗರ ಸೇರಿದಂತೆ ರಾಜ್ಯದಲ್ಲಿ ಕಡ್ಡಾಯ ಮಾಸ್ಕ್ ಧರಿಸುವಿಕೆಗೆ ವಿನಾಯಿತಿ ನೀಡುವ ಆಲೋಚನೆ ಸರ್ಕಾರದ ಮುಂದಿಲ್ಲ. ಮಾಸ್ಕ್, ಸಮಾಜಿಕ ಅಂತರ, ಲಸಿಕಾಕರಣ ಮುಂದುವರೆಯಲಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ನಾಲ್ಕನೇ ಅಲೆ ಎದುರಿಸಲು ಸರ್ಕಾರ ಸರ್ವ ಸನ್ನದ್ಧವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಲ್ಕನೇ ಅಲೆಗೆ ರಾಜ್ಯ ಸಿದ್ಧವಾಗಿದೆ ಎಂದರು.
ನಿನ್ನೆ ತಾಂತ್ರಿಕ ಸಲಹಾ ಸಮಿತಿ ಜೊತೆ ಸಭೆ ಮಾಡಿದ್ದೇವೆ. ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ. ಹೊರ ದೇಶದಿಂದ ಬರುವ ಪ್ರಯಾಣಿಕರ ಮೇಲೆ ನಿಗಾ ಇರಿಸಿ ಕ್ರಮಕೈಗೊಳ್ಳಲಾಗುತ್ತದೆ ಎಂದರು. ಇನ್ನೂ ರಾಜ್ಯದಲ್ಲಿ ಮಾಸ್ಕ್ ಫ್ರೀ ಮಾಡುವ ಆಲೋಚನೆ ನಮ್ಮ ಸರ್ಕಾರಕ್ಕೆ ಇಲ್ಲ. ತಾಂತ್ರಿಕ ಸಲಹಾ ಸಮಿತಿ ಕೂಡ ಮಾಸ್ಕ್ ಧರಿಸಬೇಕು ಎನ್ನುವ ಸಲಹೆ ನೀಡಿದೆ. ನಾವಿನ್ನೂ ಕಠಿಣ ನಿಯಮ ಮಾಡಿಲ್ಲ. ಅಂತಹ ಪರಿಸ್ಥಿತಿ ಬಂದರೆ ನಿಯಮಗಳನ್ನು ಕಠಿಣಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಖಾಸಗಿ ಕಂಪನಿಗಳು ಲಸಿಕೆಗೆ ದರ ನಿಗದಿ ಮಾಡಿವೆ. ಮೊದಲಿದ್ದ ದರಕ್ಕಿಂತ ಕಡಿಮೆ ದರ ನಿಗದಿಪಡಿಸಿವೆ. ಸರ್ಕಾರ ಉಚಿತವಾಗಿ ಲಸಿಕೆ ನೀಡುವುದನ್ನು ಮುಂದುವರಿಸಲಿದೆ. ಅವಧಿ ಮುಗಿದ ಲಸಿಕೆಯನ್ನು ಕಂಪನಿಗಳಿಗೆ ವಾಪಸ್ ಕಳುಹಿಸಲಾಗುತ್ತದೆ ಎಂದರು. ಈವರೆಗೂ 185 ಕೋಟಿ 90 ಲಕ್ಷಕ್ಕೂ ಹೆಚ್ಚು ಡೋಸ್ಗಳನ್ನು ನೀಡಲಾಗಿದೆ.