ಕರ್ನಾಟಕ

karnataka

ETV Bharat / city

ಕೋವಿಡ್ ನಂತರದ ಕಾಲದಲ್ಲಿ ಸಮಗ್ರ ಆರ್ಥಿಕ ಸುಧಾರಣೆಗೆ ಒತ್ತು ನೀಡಿದ ಬಜೆಟ್: ಆರೋಗ್ಯ ಸಚಿವ ಸುಧಾಕರ್ - ಬಜೆಟ್ ಬಗ್ಗೆ ಆರೋಗ್ಯ ಸಚಿವ ಸುಧಾಕರ್ ಪ್ರತಿಕ್ರಿಯೆ

Health minister K Sudhakar on Central Budget-2022-23: ಕೋವಿಡ್ ಬಂದ ನಂತರ ಜನರು ಮಾನಸಿಕ ಒತ್ತಡಕ್ಕೆ ಒಳಗಾಗಿರುವುದನ್ನು ಗಮನಿಸಿರುವ ಕೇಂದ್ರ ಸರ್ಕಾರ, ಇದಕ್ಕಾಗಿ ಬೆಂಗಳೂರಿನ ಪ್ರತಿಷ್ಠಿತ ನಿಮ್ಹಾನ್ಸ್ ಆಸ್ಪತ್ರೆಯನ್ನು ಆರಿಸಿಕೊಂಡು ನ್ಯಾಷನಲ್ ಟೆಲಿ ಮೆಂಟಲ್ ಹೆಲ್ತ್ ಕಾರ್ಯಕ್ರಮ ನೀಡುವುದಾಗಿ ತಿಳಿಸಿದೆ. ಇದು ಸಕಾಲಿಕವಾಗಿದ್ದು, ಇಂದಿನ ಯುವಜನತೆಗೆ ಬಹಳ ಉಪಯೋಗವಾಗಲಿದೆ ಎಂದು ಆರೋಗ್ಯ ಸಚಿವ ಸುಧಾಕರ್ ಶ್ಲಾಘಿಸಿದ್ದಾರೆ.

budget
ಆರೋಗ್ಯ ಸಚಿವ ಸುಧಾಕರ್

By

Published : Feb 1, 2022, 3:45 PM IST

ಬೆಂಗಳೂರು: ಇಂದು ಮಂಡಿಸಿರುವ ಬಜೆಟ್, ಕೋವಿಡ್ ನಂತರದ ಕಾಲದಲ್ಲಿ ದೇಶದ ಸಮಗ್ರ ಆರ್ಥಿಕ ಸುಧಾರಣೆಗೆ ಒತ್ತು ನೀಡಿದೆ. ಇದರಿಂದಾಗಿ ಜಾಗತಿಕ ಮಟ್ಟದಲ್ಲಿ ಭಾರತ ಸದೃಢವಾಗಿ ಬೆಳೆಯಲು ವೇಗ ದೊರೆತಂತಾಗಿದೆ. ಜೊತೆಗೆ ಆರೋಗ್ಯ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಲು ಆದ್ಯತೆ ದೊರೆತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.‌

ಸ್ವಾತಂತ್ರ್ಯದ 75ನೇ ವರ್ಷದತ್ತ ಸಾಗುತ್ತಿರುವ ಈ ಅಮೃತ ಕಾಲದಲ್ಲಿ, ದೇಶವನ್ನು ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಗೆ ತರಲು ಭದ್ರ ಅಡಿಪಾಯ ಹಾಕುವ ನಿಟ್ಟಿನಲ್ಲಿ ಬಜೆಟ್ ರೂಪಿಸಲಾಗಿದೆ. ಅದರಲ್ಲೂ, ಆರೋಗ್ಯ ಕ್ಷೇತ್ರದಲ್ಲಿ ಹೊಸ ಯೋಜನೆ, ಕ್ರಮಗಳನ್ನು ತಂದು ಜನರ ಜೀವನ ಗುಣಮಟ್ಟ ಅಭಿವೃದ್ಧಿಪಡಿಸಲು ಕ್ರಮ ವಹಿಸಲಾಗಿದೆ. ದೇಶದಲ್ಲಿ ಈವರೆಗೆ 166 ಕೋಟಿಗೂ ಅಧಿಕ ಲಸಿಕೆಗಳನ್ನು ನೀಡುವ ಮೂಲಕ ಜನರ ಜೀವ, ಜೀವನೋಪಾಯ ಎರಡನ್ನೂ ರಕ್ಷಿಸಲಾಗಿದೆ. ಲಸಿಕಾಕರಣವು ಕೋವಿಡ್ ನಂತರದ ಆರ್ಥಿಕ ಪುಶ್ಚೇತನಕ್ಕೆ ವೇಗ ನೀಡಿದೆ ಎಂದು ಸಚಿವರು ತಿಳಿಸಿದ್ದಾರೆ.

ಕೃಷಿ ಕ್ಷೇತ್ರದಲ್ಲಿ ಬೆಂಬಲ ಬೆಲೆ ಯೋಜನೆಯಡಿ, 2.37 ಲಕ್ಷ ಕೋಟಿ ರೂ. ನಲ್ಲಿ ಬೆಳೆ ಖರೀದಿ ನಡೆಯಲಿದೆ. ಸಹಕಾರಿ ಸಂಘಗಳ ತೆರಿಗೆ ದರವನ್ನು ಶೇ.15 ಕ್ಕೆ ಇಳಿಸಲು ತೀರ್ಮಾನಿಸಲಾಗಿದೆ. ಕಾವೇರಿ ಸೇರಿದಂತೆ 5 ನದಿಗಳ ಜೋಡಣೆಗೆ ಅನುಮತಿ ನೀಡಲಾಗಿದೆ. ಈ ಎಲ್ಲಾ ಕಾರ್ಯಗಳಿಂದಾಗಿ ಕೃಷಿಯ ಸಮಗ್ರ ಸುಧಾರಣೆ ಸಾಧ್ಯವಾಗಲಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.

ಮಾನಸಿಕ ಆರೋಗ್ಯಕ್ಕೆ ಒತ್ತು:ಕೋವಿಡ್ ಬಂದ ನಂತರ ಜನರು ಮಾನಸಿಕ ಒತ್ತಡಕ್ಕೆ ಒಳಗಾಗಿರುವುದನ್ನು ಗಮನಿಸಿರುವ ಕೇಂದ್ರ ಸರ್ಕಾರ, ಇದಕ್ಕಾಗಿ ಬೆಂಗಳೂರಿನ ಪ್ರತಿಷ್ಠಿತ ನಿಮ್ಹಾನ್ಸ್ ಆಸ್ಪತ್ರೆಯನ್ನು ಆರಿಸಿಕೊಂಡು ನ್ಯಾಷನಲ್ ಟೆಲಿ ಮೆಂಟಲ್ ಹೆಲ್ತ್ ಕಾರ್ಯಕ್ರಮ ನೀಡುವುದಾಗಿ ತಿಳಿಸಿದೆ. ಇದು ಸಕಾಲಿಕವಾಗಿದ್ದು, ಇಂದಿನ ಯುವಜನತೆಗೆ ಬಹಳ ಉಪಯೋಗವಾಗಲಿದೆ ಎಂದು ಸಚಿವರು ಶ್ಲಾಘಿಸಿದ್ದಾರೆ.

ರಾಜ್ಯದಲ್ಲಿ ಆರಂಭದಿಂದಲೇ ಕೊರೊನಾದಿಂದಾಗಿ ಮಾನಸಿಕ ಒತ್ತಡಕ್ಕೊಳಗಾದವರನ್ನು ಪತ್ತೆ ಮಾಡಿ ಆಪ್ತ ಸಮಾಲೋಚನೆ ನಡೆಸಲಾಗುತ್ತಿದೆ. ಈವರೆಗೆ, 26.08 ಲಕ್ಷ ಜನರಿಗೆ ಆಪ್ತ ಸಮಾಲೋಚನೆ ಮಾಡಲಾಗಿದೆ. ಈಗ ಕೇಂದ್ರ ಬಜೆಟ್​​ನಲ್ಲಿ ನ್ಯಾಷನಲ್ ಟೆಲಿ ಮೆಂಟಲ್ ಹೆಲ್ತ್ ಕಾರ್ಯಕ್ರಮ ನೀಡಿದ್ದು, ಇದಕ್ಕಾಗಿ ನ್ಯಾಷನಲ್ ಟೆಲಿ ಮೆಂಟಲ್ ಹೆಲ್ತ್ ಸೆಂಟರ್ ಫಾರ್ ಎಕ್ಸಲೆನ್ಸ್ ಎಂಬ ಕೇಂದ್ರಗಳನ್ನು ಆರಂಭಿಸಲಾಗುತ್ತದೆ. ಈ ಕಾರ್ಯಕ್ರಮವು 23 ಕೇಂದ್ರಗಳನ್ನು ಒಳಗೊಂಡಿರುತ್ತದೆ.‌ ಇದನ್ನು ನಮ್ಮದೇ ಬೆಂಗಳೂರಿನ ನಿಮ್ಹಾನ್ಸ್ ನಿರ್ವಹಣೆ ಮಾಡಲಿದೆ ಎಂದು ಸಚಿವ ಸುಧಾಕರ್ ಮಾಹಿತಿ ನೀಡಿದರು.

ಇದನ್ನೂ ಓದಿ: ಬಜೆಟ್ 2022: ಮಾನಸಿಕ ಆರೋಗ್ಯಕ್ಕೆ ಒತ್ತು.. ಟೆಲಿ - ಮೆಂಟಲ್ ಹೆಲ್ತ್​ ಸೆಂಟರ್​ ಸ್ಥಾಪನೆ

ಬೆಂಗಳೂರಿನ ಐಐಐಟಿ ಸಂಸ್ಥೆ ಇದಕ್ಕೆ ತಾಂತ್ರಿಕ ನೆರವು ನೀಡಲಿದೆ. ಇಂತಹ ಅವಕಾಶವನ್ನು ರಾಜ್ಯಕ್ಕೆ ನೀಡಿರುವುದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳು. ಇದರಿಂದಾಗಿ ಮಾನಸಿಕ ಆರೋಗ್ಯದ ನಿರ್ವಹಣೆಯನ್ನು ಭವಿಷ್ಯದಲ್ಲಿ ಕರ್ನಾಟಕ ಮುಂದಾಳತ್ವ ವಹಿಸಿ ಮಾದರಿಯಾಗಿ ನಿಲ್ಲಲಿದೆ ಎಂದು ಸಚಿವರು ಹೇಳಿದ್ದಾರೆ.

ಇಷ್ಟೇ ಅಲ್ಲದೆ, ಪಿಎಂ ಆವಾಸ್ ಯೋಜನೆಯಡಿ 80 ಲಕ್ಷ ಮನೆಗಳ ನಿರ್ಮಾಣ, 400 ವಂದೇ ಭಾರತ್ ರೈಲುಗಳು, ಆಧುನಿಕ ತಂತ್ರಜ್ಞಾನ ಇ-ಪಾಸ್ ಪೋರ್ಟ್ ವ್ಯವಸ್ಥೆ, 2 ಲಕ್ಷ ಅಂಗನವಾಡಿಗಳ ಉನ್ನತೀಕರಣ, ಹೊಸದಾಗಿ 3.8 ಕೋಟಿ ಮನೆಗಳಿಗೆ ನಲ್ಲಿ ಸಂಪರ್ಕ, ಸೌರ ವಿದ್ಯುತ್‍ಗೆ 19,500 ಕೋಟಿ ರೂ. ಮೊದಲಾದ ಯೋಜನೆಗಳು ದೇಶವನ್ನು ಎಲ್ಲಾ ಆಯಾಮಗಳಿಂದ ಸುಧಾರಣೆ ಮಾಡಲು ಪೂರಕವಾಗಿದೆ ಎಂದು ಸಚಿವರು ಶ್ಲಾಘಿಸಿದ್ದಾರೆ.

ಇಲ್ಲೊಮ್ಮೆ ನೋಡಿ - ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details