ಬೆಂಗಳೂರು:ಕೆಪಿಸಿಸಿ ಮಹಿಳಾ ಘಟಕದಿಂದ ಹೆಲ್ತ್ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಓದಿ: ಕೋವಿಡ್ ಪಾಸಿಟಿವಿಟಿ ದರ, ಮರಣ ಪ್ರಮಾಣ ನಿಯಂತ್ರಿಸುವಂತೆ ಸಿಎಂ ಸೂಚನೆ
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಕ್ಕಳಿಗಾಗಿ ಹೆಲ್ತ್ ಕಿಟ್ ವಿತರಣೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಸಲೀಂ ಅಹಮ್ಮದ್, ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರನಾಥ್ ಇತರರು ಪಾಲ್ಗೊಂಡು ಚಾಲನೆ ನೀಡಿದರು.
ಸಮಾರಂಭ ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಹಿಳಾ ಕಾಂಗ್ರೆಸ್ನವರು ಮಕ್ಕಳ ಆರೋಗ್ಯದ ಬಗ್ಗೆ ಸರ್ಕಾರಕ್ಕೆ ಸಂದೇಶ ರವಾನೆ ಮಾಡುತ್ತಿದ್ದಾರೆ. ಕೊರೊನಾ ಮೂರನೇ ಅಲೆಗೆ ಮುಂಜಾಗ್ರತಾ ಕ್ರಮಗಳನ್ನು ಈಗಾಗಲೇ ನಮ್ಮ ಮಹಿಳಾ ಕಾಂಗ್ರೆಸ್ ನವರು ಕೈಗೊಂಡಿದ್ದಾರೆ.
ಎರಡನೇ ಅಲೆಗೆ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳದೇ ಲಕ್ಷಾಂತರ ಜನ ಸಾವಿಗೆ ಕಾರಣವಾಗಿದೆ. ಹೀಗಾಗಿ ಮೂರನೇ ಅಲೆ ಮಕ್ಕಳಿಗೆ ಬರಬಹುದು. ಹೀಗಾಗಿ ನಮ್ಮ ಮಹಿಳಾ ಘಟಕದ ನಾಯಕರು ಮಕ್ಕಳಿಗಾಗಿ ಕಿಟ್ ರೆಡಿ ಮಾಡಿದ್ದಾರೆ. ಜನರ ಜತೆ ನಾವಿದ್ದೇವೆ ಅನ್ನೋ ಸಂದೇಶ ರವಾನೆ ಮಾಡಲು ಈ ಕಾರ್ಯಕ್ರಮ ಮಾಡ್ತಿದ್ದಾರೆ. ಸರ್ಕಾರಕ್ಕೂ ಸಂದೇಶ ರವಾನೆ ಮಾಡಲು ಮುಂದಾಗಿದ್ದಾರೆ ಎಂದರು.
ರಾಜ್ಯದಲ್ಲಿ 224 ವಿಧಾನಸಭಾ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಸೂಚನೆ ನೀಡಿದ್ದೇವೆ. ಹಾಲಿ ಶಾಸಕರು, ಮಾಜಿ ಶಾಸಕರು ಹಾಗೂ ವಿವಿಧ ಘಟಕಗಳ ಸದಸ್ಯರು ಭಾಗವಹಿಸಲು ಸೂಚಿಸಿದ್ದೇವೆ. ಚಾಮರಾಜನಗರಕ್ಕೆ ನಾನು, ನಾಯಕರು ಹೋದ ಬಳಿಕ ನ್ಯಾಯಾಂಗ ತನಿಖೆ ಆಗುತ್ತಿದೆ. ರಾಜ್ಯದ ಉಚ್ಚ ನ್ಯಾಯಾಲಯವೇ ಸಮಿತಿ ರಚನೆ ಮಾಡುವಂತೆ ಸೂಚನೆ ನೀಡಿತು. ಈ ಸರ್ಕಾರಕ್ಕೆ ಕಿವಿ, ಕಣ್ಣು, ಮೂಗು ಸಹ ಇಲ್ಲ. ಇದನ್ನ ಪದೇ ಪದೇ ಹೇಳಿದರೂ ಕೆಲಸ ಮಾಡಲಿಲ್ಲ ಎಂದರು.
ಕೊರೊನಾ ಎರಡನೇ ಅಲೆ ಬರುತ್ತೆ ಎಂದು ಸರ್ಕಾರಕ್ಕೆ ಸೂಚನೆಯಿತ್ತು, ಆದರೆ ಸರ್ಕಾರ ಮುಂಜಾಗ್ರತೆ ವಹಿಸಿಲ್ಲ. ಅದರ ಪರಿಣಾಮ ಸಾಕಷ್ಟು ಸಾವುಗಳು ಆಗಿವೆ. ಇದೀಗ ಮೂರನೇ ಅಲೆ ಬರುತ್ತದೆ ಎಂದು ಇದೆ. ಈ ಅಲೆಯಲ್ಲಿ ಮಕ್ಕಳಿಗೆ ತೊಂದರೆ ಆಗಲಿದ್ದು, ಅದಕ್ಕೆ ಮಹಿಳಾ ಕಾಂಗ್ರೆಸ್ನವರು ಎಚ್ಚರಿಸುತ್ತಿದ್ದಾರೆ. ರಾಜ್ಯದ ಹೆಣ್ಣು ಮಕ್ಕಳಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ನಮ್ಮ ಪಕ್ಷದ ಎಲ್ಲಾ ವಿಂಗ್ಗಳು ಸಭೆ ನಡೆಸಿವೆ. ನಾನು ಹಾಗೂ ಸಿಎಲ್ಪಿ ನಾಯಕ ಸಭೆಯಲ್ಲಿ ಭಾಗಿಯಾಗಿ, ಮಾರ್ಗದರ್ಶನ ಮಾಡಿದ್ದೇವೆ. ರಾಜ್ಯದಲ್ಲಿ ಏನು ಆಗುತ್ತದೆ ಎಂದು ವರದಿ ತರಿಸಲು ಸಮಿತಿ ಮಾಡಿದ್ದೇವೆ. ಹನುಮಂತಯ್ಯ ಅವರ ಮುಂದಾಳತ್ವದಲ್ಲಿ ಸಮಿತಿ ಮಾಡಿದ್ದೇವೆ. ಕೆಲವರು ದೈಹಿಕವಾಗಿ ಭಾಗವಹಿಸಲು ಹಿಂದೇಟು ಹಾಕಿದ್ದು, ಆದರೂ ಇದು ನಮ್ಮ ಡ್ಯೂಟಿ. ಚಾಮರಾಜನಗರಕ್ಕೆ ಹೋಗಿದ್ದು, ಇದರ ಪರಿಣಾಮವಾಗಿ ನ್ಯಾಯಾಲಯ ಸಮಿತಿ ರಚನೆ ಮಾಡಿದೆ. ನ್ಯಾಯ ಬದುಕಿದೆ ಎಂದು ನ್ಯಾಯಾಲಯ ತೋರಿಸಿದೆ. ವೆಂಟಿಲೇಟರ್, ಆಕ್ಸಿಜನ್ ಕೊಡಿಸುವ ಕೆಲಸ ನ್ಯಾಯಾಲಯ ಮಾಡಿದೆ ಎಂದರು.
900-1200 ರೂಪಾಯಿಗೆ ಬೆಡ್ ಮತ್ತು ವ್ಯಾಕ್ಸಿನ್ ಮಾರಾಟ ಆಗುತ್ತಿದೆ. ಇದು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸುದ್ದಿ ಆಗಿದೆ. ರಾಜ್ಯದ ಉಚ್ಚ ನ್ಯಾಯಾಲಯ ಕಣ್ಣು ತೆರೆದು ನೋಡಬೇಕು. ಸೂಕ್ತ ಆದೇಶ ಮಾಡಿ ಸರ್ಕಾರಕ್ಕೆ ತನಿಖೆ ಮಾಡುವಂತೆ ಸೂಚನೆ ನೀಡಬೇಕು. ಜನರಿಗೆ ನ್ಯಾಯ ಕೊಡಿಸಲು ಕೋರ್ಟ್ ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದರು.
ಸರ್ಕಾರದ ಬೇಜವಾಬ್ದಾರಿತನ:
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಮಕ್ಕಳಿಗೆ ಮಾಸ್ಕ್, ಔಷಧಿ, ಬಿಸ್ಕತ್ತು ಇರುವ ಪ್ಯಾಕೆಟ್ ವಿತರಣೆ ಮಾಡ್ತಿದ್ದೇವೆ. ಮಹಿಳಾ ಕಾಂಗ್ರೆಸ್ ಕೆಲಸಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮಾರ್ಗದರ್ಶನದ ಮೇಲೆ ಈ ಕಾರ್ಯ ನಡೆಯುತ್ತಿದೆ. ಸರ್ಕಾರ ಕೊರೊನಾ ವಿಚಾರದಲ್ಲಿ ಬೇಜವಾಬ್ದಾರಿತನ ತೋರಿಸಿದೆ.
ಚಾಮರಾಜನಗರದಲ್ಲಿ ಆಮ್ಲಜನಕ ಕೊರತೆಯಿಂದ 24 ಜನರ ಸಾವಿಗೆ ಕಾರಣವಾಗಿದ್ದೇ ಉದಾಹರಣೆ. ಇಂತಹ ಘಟನೆ ಇತರೆ ಎಲ್ಲಾ 29 ಜಿಲ್ಲೆಯಲ್ಲಿ ಆಗಿದೆ. ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ. ಇದಕ್ಕೆ ಯಾರು ಜವಾಬ್ದಾರಿ? ನಿರಪರಾಧಿಗಳು ಸಾವನ್ನಪ್ಪಿದರೆ 2 ಲಕ್ಷ ರೂ. ಪರಿಹಾರ ಕೊಟ್ಟರೆ ಮುಗಿಯಿತಾ?. ಚಾಮರಾಜನಗರ ಜಿಲ್ಲೆ ಅಲ್ಲದೇ ಬೇರೆ ಜಿಲ್ಲೆಯಲ್ಲಿ ಆಮ್ಲಜನಕ ಇಲ್ಲದೇ ಸತ್ತವರ ಕತೆ ಏನು. ಇಂತಹ ನರಹಂತಕ, ಅಮಾನವೀಯ, ನಿರ್ಲಕ್ಷಿತ ಸರ್ಕಾರವನ್ನು ನಾನು ಕಂಡಿಲ್ಲ. ಯಡಿಯೂರಪ್ಪರಂಥ ಬೇಜವಾಬ್ದಾರಿಯ, ವ್ಯರ್ಥ ಸಿಎಂ ಇನ್ನೊಬ್ಬರಿಲ್ಲ ಎಂದರು.
ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಇದೆ. ತೆರೆದ ಮಾರುಕಟ್ಟೆಯಲ್ಲಿಕೊಂಡು ಲಸಿಕೆ ನೀಡುತ್ತಿದ್ದಾರೆ. ಸಮಾನ ಬೆಲೆ ಇಲ್ಲ, ಬೇಕಾಬಿಟ್ಟಿ ದರ ಏರಿಸಿದ್ದಾರೆ. ಸರ್ಕಾರ ಇವರ ಜತೆ ಶಾಮೀಲಾಗಿದೆ, ಕಪ್ಪು, ಬಿಳಿ, ಹಳದಿ ಫಂಗಸ್ ಬೇರೆ ಬಂದಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಕೇಂದ್ರ ಸರ್ಕಾರದಿಂದ ನಮಗೆ ಇನ್ನೂ ಆಕ್ಸಿಜನ್ ಬರ್ತಿಲ್ಲ. 1700 ಮೆಟ್ರಿಕ್ ಟನ್ ಕೊಡಿ ಎಂದು ಆದೇಶ ಆಗಿದೆ. ಆದರೆ ಇವರು 1100-1200 ಮೆಟ್ರಿಕ್ ಟನ್ ಆಕ್ಸಿಜನ್ ಕೊಡುತ್ತಿದ್ದು, ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದರು.
ಮೂರನೇ ಅಲೆ ಸೆಪ್ಟೆಂಬರ್-ಅಕ್ಟೋಬರ್ ನಲ್ಲಿ ಬರಲಿದೆ ಎನ್ನಲಾಗುತ್ತಿದ್ದು, ಮಕ್ಕಳಿಗೆ ಅಪಾಯ ಎನ್ನಲಾಗುತ್ತಿದೆ. ಇದರಿಂದ ಸರ್ಕಾರ ಎಚ್ಚೆತ್ತುಕೊಳ್ಳಬೇಕು, ಸರ್ಕಾರ ಸಿದ್ದತೆ ಮಾಡಿಕೊಳ್ಳಲಿ ಎಂದು ಸೂಚಿಸಿದರು. ಈ ಸರ್ಕಾರಕ್ಕೆ ಪ್ರಜಾಪ್ರಭುತ್ವ ದಲ್ಲಿ ನಂಬಿಕೆ ಇಲ್ಲ. ತಮಿಳುನಾಡಿನ ಸಿಎಂ ಸ್ಟ್ಯಾಲಿನ್ ಗೆ ಪ್ರತಿಪಕ್ಷದ ಮೇಲೆ ನಂಬಿಕೆ ಇದೆ. ಇಲ್ಲಿ ಸರ್ವಪಕ್ಷ ಸಭೆ ಕರೆಯಲು ಸಹ ಸಿಎಂ ಮುಂದಾಗಿಲ್ಲ. ಪ್ರತಿಪಕ್ಷ ನಾಯಕನಾಗಿ ನನಗೆ ಅಧಿಕಾರಿಗಳ ಜತೆ ಸಭೆ ಮಾಡಲು ಅವಕಾಶ ನೀಡಿಲ್ಲ. ಪ್ರತಿಪಕ್ಷ ವನ್ನು ವಿಶ್ವಾಸಕ್ಕೆ ಪಡೆಯುವ ಕಾರ್ಯ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.