ಬೆಂಗಳೂರು :ಕಾಂಗ್ರೆಸ್ ಪಕ್ಷ ಆರಂಭಿಸಿರುವ ಆರೋಗ್ಯ ಹಸ್ತ ಕಾರ್ಯಕ್ರಮದಡಿ ಪಕ್ಷದ ಕಾರ್ಯಕರ್ತರಿಗೆ ಆರೋಗ್ಯ ವಿಮೆ ಮಾಡಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ಈ ಸಂಬಂಧ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, ಕೊರೊನಾ ಮಹಾಮಾರಿಯನ್ನು ಎದುರಿಸುವ ಸಲುವಾಗಿ ಪಕ್ಷ ಆರೋಗ್ಯ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದರಲ್ಲಿ ಕೊರೊನಾ ವಾರಿಯರ್ಗಳಾಗಿ ಕಾರ್ಯನಿರ್ವಹಿಸುತ್ತಿರುವ ಪಕ್ಷದ ಕಾರ್ಯಕರ್ತರಿಗೆ ಆರೋಗ್ಯ ವಿಮೆ ಮಾಡಿಸಲಾಗುವುದು. ಜಿಲ್ಲಾ ಕಾಂಗ್ರೆಸ್ ಸಮಿತಿ, ಬ್ಲಾಕ್ ಕಾಂಗ್ರೆಸ್ ಸಮಿತಿ, ಶಾಸಕರು ಮತ್ತು 2018ರ ವಿಧಾನಸಭಾ ಚುನಾವಣಾ ಅಭ್ಯರ್ಥಿಗಳೊಂದಿಗೆ ಸಮಾಲೋಚಿಸಿ ಪಟ್ಟಿ ತಯಾರಿಸಲು ಮತ್ತು ಇದಕ್ಕೆ ಸಂಬಂಧಿಸಿದಂತೆ ಕಾರ್ಯ ನಿರ್ವಹಿಸುವ ಸಲುವಾಗಿ ಸಮಿತಿ ರಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ವಿಧಾನಸಭೆ ಮುಖ್ಯ ಸಚೇತಕ ಅಜಯ್ ಸಿಂಗ್ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಕೆಪಿಸಿಸಿಯ ಮಾಜಿ ಪ್ರಧಾನ ಕಾರ್ಯದರ್ಶಿ ಆಗ ಸುಲ್ತಾನ್ ಸಂಚಾಲಕರಾಗಿದ್ದಾರೆ. ಸದಸ್ಯರಾಗಿ ಕೆಪಿಸಿಸಿ ಮಾಜಿ ಕಾರ್ಯದರ್ಶಿ ರಾಮಲಿಂಗಯ್ಯ, ರಾಷ್ಟ್ರೀಯ ಯುವ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ರಕ್ಷಾ ರಾಮಯ್ಯ, ಕೆಪಿಸಿಸಿ ಮಾಜಿ ಕಾರ್ಯದರ್ಶಿಗಳಾದ ಬಿ ಆರ್ ನಾಯ್ಡು, ಸುಧೀಂದ್ರ ಎನ್, ಅಮರೇಶ್, ಮಿಲಿಂದ ಧರ್ಮಸೇನ, ರವೀಂದ್ರ ಹೆಚ್ಎನ್, ಬಿಕೆ ಮಧುಸೂದನ್, ಸಂಗಮೇಶ್ ಕೊಳ್ಳಿಯವರ್, ಡಾ. ಶ್ರೀನಿವಾಸ್ ವೇಲು, ಡಾ. ಶಂಕರ್ ಗುಹಾ, ಡಾ. ಉಮೇಶ್ ಬಾಬು, ಸಪ್ತಗಿರಿ ಚಂಕರ್ ನಾಯ್ಡು, ವಕೀಲ ದೀಪು ಸಿಆರ್, ಯುವ ಕಾಂಗ್ರೆಸ್ನ ಕಾರ್ಯದರ್ಶಿ ಸುಮತ ಧನಂಜಯ, ವಿಕಾಸ ರಾಜ್, ವಿಜಯ್ ಮತ್ತಿಕಟ್ಟಿ ಪಿ ಗಾಂಧಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಭೇಟಿಗೆ ಸಮಯ ನಿಗದಿ :ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರತಿದಿನ ಪಕ್ಷದ ಕಚೇರಿಯಲ್ಲಿ ತಮ್ಮನ್ನು ಭೇಟಿ ಮಾಡುವವರಿಗಾಗಿ ಸಮಯಮಿತಿ ನಿಗದಿಪಡಿಸಿದ್ದಾರೆ. ಅದರ ಪ್ರಕಾರ ಬೆಳಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ಪಕ್ಷದ ಎಲ್ಲಾ ಜಿಲ್ಲಾಧ್ಯಕ್ಷರು ಬ್ಲಾಕ್ ಅಧ್ಯಕ್ಷರು ಮತ್ತು ಕೆಪಿಸಿಸಿ ಪದಾಧಿಕಾರಿಗಳು ಭೇಟಿ ಆಗಬಹುದಾಗಿದೆ. ಮಧ್ಯಾಹ್ನ 2.30 ರಿಂದ ಸಂಜೆ 4ರ ವೇಳೆ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಭೇಟಿಗೆ ಮೀಸಲಿಡಲಾಗಿದೆ. ಸಂಜೆ 4.30 ರಿಂದ 6ಗಂಟೆಯವರೆಗೆ ಎಲ್ಲ ಶಾಸಕರು, ಸಂಸದರು ಮಾಜಿ ಶಾಸಕರು ಮಾಜಿ ಸಂಸದರು ಮತ್ತು ಹಿರಿಯ ನಾಯಕರು ಭೇಟಿ ಆಗಬಹುದಾಗಿದೆ.
ಸದಾಶಿವನಗರ ಗೃಹ ಕಚೇರಿಯಲ್ಲಿ ನನ್ನ ಮತ ಕ್ಷೇತ್ರದ ಜನತೆಯನ್ನು ಭೇಟಿ ಮಾಡಬೇಕಾಗಿರುವುದರಿಂದ ಉಳಿದ ನಾಯಕರನ್ನು ಭೇಟಿ ಮಾಡಲು ತೊಂದರೆಯಾಗಬಹುದು ಎಂದು ತಿಳಿಸುತ್ತಾ ಮೇಲೆ ನಮೂದಿಸಿದ ಸಮಯವನ್ನು ಹೊರತುಪಡಿಸಿ ತಮ್ಮನ್ನು ಸಂಪರ್ಕಿಸುವ ನಾಯಕರು ತಮ್ಮ ಆಪ್ತ ಕಾರ್ಯದರ್ಶಿ, ಆಪ್ತ ಸಹಾಯಕ, ಕೆಪಿಸಿಸಿ ಆಪ್ತ ಸಹಾಯಕ ಇಲ್ಲವೇ ಪತ್ರಿಕಾ ಕಾರ್ಯದರ್ಶಿಯನ್ನು ಸಂಪರ್ಕಿಸುವಂತೆ ಕೋರಿದ್ದಾರೆ.
ಅಧ್ಯಯನ ವರದಿಗೆ ಸೂಚನೆ :ಕರ್ನಾಟಕ ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ಹಾಗೂ ರೈತರು, ಕೃಷಿ ಕಾರ್ಮಿಕರು ಅನುಭವಿಸುತ್ತಿರುವ ತೊಂದರೆಗಳ ಕುರಿತು ಅಧ್ಯಯನ ವರದಿ ನೀಡುವಂತೆ ಶಿವಕುಮಾರ್ ಕರ್ನಾಟಕ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾಗೆ ಸೂಚನೆ ನೀಡಿದ್ದಾರೆ. ಈ ಕಾಯ್ದೆಯ ತಿದ್ದುಪಡಿಯಿಂದ ಮುಂದಿನ ದಿನಗಳಲ್ಲಿ ರೈತರಿಗೆ ದೊಡ್ಡ ಸಂಕಷ್ಟ ಎದುರಾಗುವ ಮುನ್ಸೂಚನೆ ಇದೆ.
ಅಲ್ಲದೆ ಕೋವಿಡ್ ಸಂದರ್ಭದಲ್ಲಿ ಸರ್ಕಾರದ ಅವೈಜ್ಞಾನಿಕ ನೀತಿಗಳಿಂದ ರೈತರು ಹಾಗೂ ಕೃಷಿಕರು ಅನುಭವಿಸುತ್ತಿರುವ ತೊಂದರೆಗಳ ವಿಚಾರವಾಗಿ ವಿಭಾಗವಾರು ವಾಸ್ತವತೆಗಳ ಬಗ್ಗೆ ರೈತರು ಮತ್ತು ರೈತ ಮುಖಂಡರ ಜೊತೆ ಸಂವಹನ ನಡೆಸಿ ಅಧ್ಯಯನ ವರದಿ ಸಿದ್ಧಪಡಿಸುವಂತೆ ಸೂಚಿಸಿದ್ದಾರೆ.