ಬೆಂಗಳೂರು:ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆಯು ಅಪ್ಪಳಿಸಿ ಇದೀಗ ಅದರ ತೀವ್ರತೆ ಗಣನೀಯವಾಗಿ ಕುಸಿದಿದೆ. ಇದರಿಂದ ರಾಜ್ಯದಲ್ಲಿ ಒಮಿಕ್ರಾನ್ ದಾಳಿ ಬಳಿಕ ಎಷ್ಟು ಜನರಿಗೆ ಸೋಂಕು ವ್ಯಾಪಿಸಿದೆ ಎಂಬುದನ್ನು ತಿಳಿಯಲು ಸರ್ಕಾರ ಸೆರೋ ಸಮೀಕ್ಷೆ ನಡೆಸಲು ಮುಂದಾಗಿದೆ.
ಹೊಸ ರೂಪಾಂತರಿ ಒಮಿಕ್ರಾನ್ ಸೋಂಕು ಉಲ್ಬಣಗೊಂಡು ಜನವರಿ ಮೊದಲ ವಾರದಲ್ಲಿ ಪಾಸಿಟಿವ್ ರೇಟ್ ಶೇ.5ರಷ್ಟು ದಾಟಿತ್ತು. ಅಲ್ಲಿಂದ ಹೆಚ್ಚುತ್ತಾ ಗರಿಷ್ಠ ಶೇ.32.95 ರಷ್ಟು ತಲುಪಿತ್ತು. ಇದಾದ ಬಳಿಕ ದಿನೇ ದಿನೆ ಇಳಿಕೆ ದಾರಿ ಹಿಡಿದ ಸೋಂಕು ಫೆಬ್ರವರಿ ಮೊದಲ ವಾರದಲ್ಲಿ ಶೇ.5ರೊಳಗೆ ಬಂದಿತ್ತು. ಇದೀಗ ಫೆಬ್ರವರಿ ಅಂತ್ಯದಿಂದ ರಾಜ್ಯದಲ್ಲಿ ಒಟ್ಟಾರೆ ಪಾಸಿಟಿವಿಟಿ ದರ ಶೇ.0.52 ಮಾತ್ರವಿದೆ. ಕೊಡಗು, ಮೈಸೂರು, ಬೆಂಗಳೂರು ನಗರ, ತುಮಕೂರು, ಚಿಕ್ಕಮಗಳೂರು, ಬಳ್ಳಾರಿ ಜಿಲ್ಲೆಯಲ್ಲಿ ಮಾತ್ರ ಪಾಸಿಟಿವ್ ರೇಟ್ ಶೇ.0.60 ಇದ್ದು, ಉಳಿದಂತೆ ಇತರೆ ಜಿಲ್ಲೆಗಳಲ್ಲಿ ಶೇ.50 ರೊಳಗೆ ಇದೆ.
ಮೊದಲ ಹಾಗೂ ಎರಡನೇ ಅಲೆಗೆ ಹೋಲಿಸಿದರೆ ಮೂರನೇ ಅಲೆಯಲ್ಲಿ ಸಾವು- ನೋವಿನ ಪ್ರಮಾಣವೂ ಕಡಿಮೆ ಇದೆ. ಈ ಹಿಂದಿನ ಅಲೆಯಲ್ಲಿ ಪಾಸಿಟಿವ್ ದರ ಕಡಿಮೆ ಆಗಲು ತಿಂಗಳಾನುಗಟ್ಟಲೆ ಲಾಕ್ಡೌನ್ನಂತಹ ಕಠಿಣ ಕ್ರಮಗಳಿಗೆ ಮುಂದಾಗಬೇಕಿತ್ತು. ಆದರೆ, ಈ ಬಾರಿ ಲಘು ನಿಯಂತ್ರಣ ಕ್ರಮಗಳನ್ನಷ್ಟೇ ಸರ್ಕಾರ ಕೈಗೊಂಡಿತ್ತು. ಈ ಮಧ್ಯೆ ಒಮಿಕ್ರಾನ್ ಎಂಟ್ರಿ ಕೊಟ್ಟು ಆರಂಭದಲ್ಲಿ ಆತಂಕ ಮೂಡಿಸಿತಾದರೂ ತದನಂತರ ಅದರ ತೀವ್ರತೆಯೂ ಇಳಿದಿದೆ.