ಬೆಂಗಳೂರು:ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಐಎಎಸ್ ಅಧಿಕಾರಿಗಳ ವರ್ಗಾವಣೆ ದಂಧೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಮಗನನ್ನು ಮುಂದೆ ಬಿಟ್ಟಿದ್ದಾರೆ ಎಂದು ಆರೋಪಿಸಿದ್ದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಮತ್ತು ಬಿಎಸ್ವೈ ಪುತ್ರ ಬಿ.ವೈ. ವಿಜಯೇಂದ್ರ ಟಾಂಗ್ ನೀಡಿದ್ದಾರೆ.
ಧವಳಗಿರಿ ನಿವಾಸದೆದುರು ಮಾತನಾಡಿದ ಅವರು, ಕುಮಾರಸ್ವಾಮಿ ಶ್ರೀರಾಮಚಂದ್ರರು. ಅವರು ಅಧಿಕಾರದಲ್ಲಿದ್ದಾಗ ಅರ್ಹತೆ ಆಧಾರದಲ್ಲೇ ವರ್ಗಾವಣೆ ಮಾಡಿದ್ದು, ಇಡೀ ರಾಜ್ಯಕ್ಕೆ ಗೊತ್ತಿದೆ. ವಿನಾಕಾರಣ ವರ್ಗಾವಣೆ ದಂಧೆ ಬಗ್ಗೆ ನಮ್ಮ ವಿರುದ್ಧ ಆರೋಪ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ವೈ ವಿಜಯೇಂದ್ರ ಅಧಿಕಾರದಲ್ಲಿದ್ದಾಗ ಅವರ ಇಡೀ ಕುಟುಂಬ ವರ್ಗಾವಣೆ ದಂಧೆಯಲ್ಲಿ ತೊಡಗಿತ್ತು. ಲೋಕೋಪಯೋಗಿ ಇಲಾಖೆಯಲ್ಲಿ 700 ಎಂಜಿನಿಯರ್ಗಳನ್ನು ರಾತ್ರೋರಾತ್ರಿ ವರ್ಗಾವಣೆ ಮಾಡಿದ್ದು, ಭಾರಿ ಚರ್ಚೆಗೂ ಬಂದಿತ್ತು. ಯಾವುದೇ ಆಧಾರ ಇಲ್ಲದೆ ಸುಳ್ಳು ಆರೋಪ ಮಾಡಬಾರದು. ಆಧಾರ ಇದ್ದರೆ ದಾಖಲೆ ಬಿಡುಗಡೆ ಮಾಡಲಿ ಎಂದು ವಿಜಯೇಂದ್ರ ಸವಾಲು ಹಾಕಿದ್ದಾರೆ.
ಇನ್ನು ಸಿಬಿಐಗೆ ಫೋನ್ ಕದ್ದಾಲಿಕೆ ಪ್ರಕರಣ ವಹಿಸಿದ ಬಳಿಕ ಕುಮಾರಸ್ವಾಮಿ ಅವರು ಆತಂಕದಲ್ಲಿದ್ದಾರೆ. ಆದ್ದರಿಂದ ಹಿಟ್ ಆ್ಯಂಡ್ ರನ್ ಹೇಳಿಕೆ ಕೊಟ್ಟಿದ್ದಾರೆ. ನಾನು ಆಡಳಿತ ವಿಚಾರದಲ್ಲಿ ತಲೆ ಹಾಕಿಲ್ಲ. ಮಧ್ಯಪ್ರವೇಶ ಮಾಡುವುದೂ ಇಲ್ಲ. ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ. ಸುಖಾಸುಮ್ಮನೆ ಈ ರೀತಿ ಆರೋಪ ಮಾಡುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಟ್ಟಟ್ಟರ್ನಲ್ಲೂ ಹೆಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ವಿಜಯೇಂದ್ರ ಹರಿಹಾಯ್ದಿದ್ದಾರೆ. ಕಮೀಷನ್ ದಂಧೆ, ವರ್ಗಾವಣೆ ದಂಧೆ, ನೇಮಕಾತಿ ದಂಧೆಗಳ ಜನಕರು ಹಾಗೂ ಗುತ್ತಿಗೆದಾರರು ನೀವೆಂಬುದು ಇಡೀ ರಾಜ್ಯಕ್ಕೇ ತಿಳಿದಿದೆ ಕುಮಾರ ಸ್ವಾಮಿಯವರೇ, “ಕೋತಿ ತಾನು ತಿಂದು ಮೇಕೆ ಬಾಯಿಗೆ ವರೆಸಿದಂತಿದೆ“ ನಿಮ್ಮ ಮಾತುಗಳು. ಸಿಬಿಐ ತನಿಖೆಗೆ ಹೆದರಿ ಹತಾಶ ಹೇಳಿಕೆ ನೀಡುತ್ತಿದ್ದೀರಿ. ವಿಷಯಾಂತರಗೊಳಿಸಿ ಜನತೆಯ ದಿಕ್ಕು ತಪ್ಪಿಸುವ ಕುತಂತ್ರದ ಮಾತು ನಿಲ್ಲಿಸಿ ಎಂದು ಟ್ವಿಟ್ಟರ್ ಮೂಲಕ ತಿರುಗೇಟು ಸಹ ನೀಡಿದ್ದರು.