ಕರ್ನಾಟಕ

karnataka

ETV Bharat / city

'ಸಿದ್ದಹಸ್ತ'ರೊಬ್ಬರು ಬಿಡಿಎ 'ರೀಡೂ ಋಣ'ದ ತಿಂಮಿಗಿಲವನ್ನೇ ಕೆಪಿಎಸ್​ಸಿಯಲ್ಲಿ ಕೂರಿಸಿದ್ದರು': ಹೆಚ್​ಡಿಕೆ - Former CM H.D.Kumaraswamy

2006ರಲ್ಲಿ ಮಾತ್ರವಲ್ಲ, 2018ರಲ್ಲೂ ಕೆಲವು ಶಾಸಕರು ತಮ್ಮ ಸಮುದಾಯದವರನ್ನು ಕೆಪಿಎಸ್‌ಸಿ ಸದಸ್ಯರನ್ನಾಗಿ ಮಾಡಲು ದಂಬಾಲು ಬಿದ್ದಿದ್ದರು. ಆದರೆ, ನಾನು ಯಾವುದಕ್ಕೂ ಮಣಿಯದೇ ಅವರಿಗೆ ಬುದ್ಧಿ ಹೇಳಿ ಕಳುಹಿಸಿದ್ದೆ ಎಂದು ಸಿದ್ದರಾಮಯ್ಯ ವಿರುದ್ಧ ಹೆಚ್​ಡಿಕೆ ಸರಣಿ ಟ್ವೀಟ್​ಗಳ ಮೂಲಕ ಉತ್ತರ ನೀಡಿದ್ದಾರೆ..

Former CM H.D.Kumarswamy
ಮಾಜಿ ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ

By

Published : May 8, 2022, 1:33 PM IST

ಬೆಂಗಳೂರು :ಕೆಪಿಎಸ್ಸಿಯನ್ನು ತೊಳೆಯುತ್ತೇನೆಂದ ʼಸಿದ್ದಹಸ್ತʼರೊಬ್ಬರು ಬಿಡಿಎಯನ್ನು ಗುಡಿಸಿಗುಂಡಾಂತರ ಮಾಡಿದ್ದ,'ರೀಡೂ ಋಣ'ದ 'ತಿಮಿಂಗಿಲ'ವನ್ನೇ ತಂದು ಕೆಪಿಎಸ್ಸಿಯಲ್ಲಿ ಕೂರಿಸಿದ್ದರು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡಿದ್ದಾರೆ.

ಸರಣಿ ಟ್ವೀಟ್ ಮಾಡಿರುವ ಅವರು, ನಾನು ಭ್ರಷ್ಟರು ಉದ್ಯೋಗಸೌಧದ ಮೆಟ್ಟಿಲು ಹತ್ತಲು ಬಿಟ್ಟಿರಲಿಲ್ಲ. 2 ಸಲ ಸಿಎಂ ಆಗಿದ್ದಾಗ ಕೆಪಿಎಸ್ಸಿ ಅಕ್ರಮಗಳಿಗೆ ಕಡಿವಾಣ ಹಾಕಿದ್ದೆ. 2018ರಲ್ಲಿ ನಾನು ಸಿಎಂ ಆಗಿದ್ದಾಗ 'ಸಿದ್ದಹಸ್ತರು' ತಮಗೆ ಬೇಕಾದವರ ಹೆಸರನ್ನು ಶಿಫಾರಸು ಮಾಡಿ, ಕೆಪಿಎಸ್ಸಿಯಲ್ಲಿ ಪ್ರತಿಷ್ಠಾಪಿಸಿ ಎಂದು ಒತ್ತಡ ಹೇರಿದ್ದರು. 2006ರಲ್ಲೂ ಕೆಲ ಶಾಸಕರು ತಮ್ಮ ಸಮುದಾಯದವರನ್ನು ಕರೆತಂದು ಕೆಪಿಎಸ್ಸಿ ಸದಸ್ಯರನ್ನಾಗಿ ಮಾಡಿ ಎಂದು ದುಂಬಾಲು ಬಿದ್ದಿದ್ದರು. ಅವರಿಗೆ ಬುದ್ಧಿ ಹೇಳಿ ವಾಪಸ್ ಕಳಿಸಿದ್ದೆ ಎಂದು ವಿವರಿಸಿದ್ದಾರೆ.

ನನ್ನ ಅಧಿಕಾರಾವಧಿಯಲ್ಲಿ ಒಮ್ಮೆಯೂ ಯಾವುದೇ ಇಲಾಖೆಯಲ್ಲಿ ನೇಮಕದ ಅಕ್ರಮ ನಡೆದಿಲ್ಲ. ಸಚ್ಛಾರಿತ್ರ್ಯ, ಅರ್ಹತೆ ಇದ್ದವರನ್ನೇ ಕೆಪಿಎಸ್ಸಿಗೆ ನೇಮಕ ಮಾಡಿದ್ದೆ. ಅಂಥ ನೇಮಕಾತಿ ಅಥವಾ ಉದ್ಯೋಗ ನೀಡಿಕೆಯಲ್ಲಿ ಸಣ್ಣ ಲೋಪವೂ ಆಗಿಲ್ಲ. ಒಂದು ವೇಳೆ ಲೋಪವಾಗಿದ್ದರೆ ಯಾವುದೇ ತನಿಖೆಗೂ ನಾನು ಸಿದ್ಧ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ, ಸ್ವಜನ ಪಕ್ಷಪಾತ, ಕಳ್ಳಮಾರ್ಗ, ಭ್ರಷ್ಟಾಚಾರಗಳು ತಾಂಡವವಾಡುತ್ತಿವೆ.

ಕರ್ನಾಟಕ ಲೋಕಸೇವಾ ಆಯೋಗ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಪೊಲೀಸ್ ನೇಮಕಾತಿ ಮಂಡಳಿಗಳು ಲಂಚಗುಳಿತನದ ಕೂಪಗಳಾಗಿವೆ ಎಂದು ಟೀಕಿಸಿದ್ದಾರೆ. ಪ್ರತಿ ಹುದ್ದೆಗೂ ರೇಟ್ ಫಿಕ್ಸ್ ಮಾಡಿರುವ ರಾಜ್ಯ ಸರ್ಕಾರವು 'ಉದ್ಯೋಗ ವ್ಯಾಪಾರೀಕರಣ'ವನ್ನೇ 'ಅಧಿಕೃತ ಕಸುಬು' ಮಾಡಿಕೊಂಡಿದೆ. 'ಸರ್ಕಾರಿ ಕೆಲಸದ ರೇಟ್ ಕಾರ್ಡ್' ಬಗ್ಗೆ ನಾನು ಪದೇಪದೆ ಹೇಳುತ್ತಲೇ ಇದ್ದೆ.

ಕೆಪಿಎಸ್ಸಿ ಹುದ್ದೆಗಳ 'ಮುಕ್ತ ಮಾರಾಟ'ದ ಬಗ್ಗೆಯೂ ಹೇಳಿದ್ದೆ. ಆದರೆ, ಸರ್ಕಾರದ್ದು ಜಾಣನಿದ್ದೆ. ನೇಮಕಾತಿ ಸಂಸ್ಥೆಗಳು ಹುಟ್ಟಿದಾಗಿನಿಂದಲೂ ರಾಜಕೀಯ ಕಾರಣಗಳಿಗೆ ಕೆಲವರು ಉದ್ಯೋಗ ಗಿಟ್ಟಿಸುತ್ತಿದ್ದರು. 'ಸಾಧ್ಯವಾದರೆ ಸಹಾಯ ಮಾಡಿ' ಎಂದು ಶಾಸಕರೋ, ಮತ್ತ್ಯಾರೋ ಮನವಿ ಮಾಡುತ್ತಿದ್ದರು. ಅಂಥ ಅಭ್ಯರ್ಥಿಗಳು ಅರ್ಹ ಅಂಕ ಪಡೆದಿದ್ದರೆ ಮಾತ್ರ ಆಯ್ಕೆ ಆಗುತ್ತಿದ್ದರು ಎಂದು ವಿವರಿಸಿದ್ದಾರೆ.

ಹಿಂದೆ ಶಿಫಾರಸು ಅಭ್ಯರ್ಥಿಗಳಿಗೆ ಅರ್ಹತೆ ಇಲ್ಲದಿದ್ದರೆ ಸಿಎಂ ಹೇಳಿದರೂ ಕೆಲಸ ಆಗುತ್ತಿರಲಿಲ್ಲ. ಯಾವಾಗ ಹಣ, ಜಾತಿಗಳ ಪ್ರಭಾವ ಹೆಚ್ಚಾಯಿತೋ 'ಸರ್ಕಾರಿ ಕೆಲಸಗಳ 'ಕಾಸ್‌'ಗೀಕರಣ'ವೂ ಶುರುವಾಯಿತು. ಪಿಎಸ್ಐ ಅಕ್ರಮದ ಬಗ್ಗೆ ಕಹಿಸತ್ಯಗಳನ್ನು ಹೇಳಿದ ನನ್ನನ್ನೇ ದಾಖಲೆ ಕೊಡಿ ಎನ್ನುವ ಸರ್ಕಾರಕ್ಕೆ 'ಸಾಚಾತನ'ದ ಕೊರತೆ ಇದೆ. ಹಿಟ್ ಅಂಡ್ ರನ್ ಎನ್ನುವ ಮೂಲಕ ಕೆಲವರು ಅಕ್ರಮದ ಬಲೆಯಿಂದ ಅಕ್ಕಪಕ್ಕ ಸರಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ:ಪಿಎಸ್ಐ ಪರೀಕ್ಷೆ ಅಕ್ರಮ: ಕಿಂಗ್‌ಪಿನ್ ಆರ್.ಡಿ.ಪಾಟೀಲ್ ಜೈಲಿಗೆ ಸ್ಥಳಾಂತರ

ABOUT THE AUTHOR

...view details