ಬೆಂಗಳೂರು: ಗೃಹ ಸಚಿವ ಬಸವರಾಜ ಬೊಮ್ಮಾಯಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ, ಅವರು ಜೆಡಿಎಸ್ ಸೇರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಬೊಮ್ಮಾಯಿ ನಿವಾಸಕ್ಕೆ ಭೇಟಿ ನೀಡಿದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆರ್.ಟಿ. ನಗರದಲ್ಲಿರುವ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಭೇಟಿ ನೀಡಿ, ಉಭಯ ಕುಶಲೋಪರಿ ವಿಚಾರಿಸಿ ಕೆಲಕಾಲ ಮಾತುಕತೆ ನಡೆಸಿದರು. ಸದ್ಯದ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಹೆಚ್ಡಿಕೆ, ಬೊಮ್ಮಾಯಿ ಭೇಟಿ ಕುತೂಹಲ ಕೆರಳಿಸಿದೆ.
ಬೊಮ್ಮಾಯಿ ಭೇಟಿ ನಂತರ ಮಾತನಾಡಿದ ಕುಮಾರಸ್ವಾಮಿ, ಬೊಮ್ಮಾಯಿ ನಾನು ಹಳೆಯ ಸ್ನೇಹಿತರು. ಹಾಗಾಗಿ ಭೇಟಿ ಮಾಡಿದೆ, ಕೆಲವೊಂದು ವಿಚಾರ ಮಾತನಾಡಿದ್ದೇವೆ ಅಷ್ಟೇ, ಯಾವುದೇ ರಾಜಕೀಯ ವಿಷಯಗಳ ಕುರಿತು ಚರ್ಚೆಯಾಗಿಲ್ಲ ಎಂದು ತಿಳಿಸಿದರು.
ಬೊಮ್ಮಾಯಿ ಅವರ ತಂದೆ ಎಸ್.ಆರ್. ಬೊಮ್ಮಾಯಿ ಹಾಗೂ ತಮ್ಮ ತಂದೆ ದೇವೇಗೌಡರು ಕೂಡ ಸ್ನೇಹಿತರು. ಹೀಗಾಗಿ ಅವರ ನಮ್ಮ ನಡುವೆ ಬಾಂಧವ್ಯವಿದೆ. ಅವರು ಯಾವುದೇ ಕಾರಣಕ್ಕೂ ಜೆಡಿಎಸ್ ಸೇರ್ಪಡೆ ಆಗಲ್ಲ, ಗೃಹ ಸಚಿವರಾಗಿದ್ದಾರೆ, ಅವರು ಯಾಕೆ ಜೆಡಿಎಸ್ ಸೇರ್ತಾರೆ?, ಇದು ಕೇವಲ ಅನೌಪಚಾರಿಕ ಭೇಟಿ ಅಷ್ಟೇ ಎಂದು ಹೇಳಿ ನಿರ್ಗಮಿಸಿದರು.