ಬೆಂಗಳೂರು : ಶಿಕ್ಷಣವನ್ನು ಉಳ್ಳವರಿಗೆ ಒತ್ತೆ ಇಟ್ಟ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಸಗಿದ ಪಾಪಕ್ಕೆ ಮುಗ್ಧ ವಿದ್ಯಾರ್ಥಿ ನವೀನ್ ಬಲಿ ಆಗಿದೆ. ರಾಜಕಾರಣಿಗಳು, ಶ್ರೀಮಂತರಿಗೆ ಉನ್ನತ ಶಿಕ್ಷಣವು ದುಡ್ಡು ಸಂಗ್ರಹ ಮಾಡುವ ಹುಂಡಿಯಾಗಿದೆ. ಇದರಲ್ಲಿ ಅನುಮಾನವೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ದೂರದ ಉಕ್ರೇನ್ ದೇಶದಲ್ಲಿ ಜೀವ ಚೆಲ್ಲಿ ಹುಟ್ಟಿದೂರಿನಲ್ಲಿ ನಿಶ್ಚಲವಾಗಿ ಮಲಗಿದ್ದ ನವೀನ್ ಭಾರತದ ಆತ್ಮಸಾಕ್ಷಿಗೆ ಎದುರಾಗಿರುವ ದೊಡ್ಡ ಪ್ರಶ್ನೆ. ವಿದ್ಯೆಯ ಹೆಸರಿನಲ್ಲಿ ದಂಧೆ ನಡೆಸುವ ದುರಾಸೆಗೂ ಒಂದು ಸವಾಲು. ಹಾಗಾದರೆ, ಇನ್ನೆಷ್ಟು ನವೀನ್ರು ಬಲಿ ಆಗಬೇಕು? ಎಂದು ಪ್ರಶ್ನಿಸಿದ್ದಾರೆ.
ಧನದಾಹಕ್ಕೆ ಕಡಿವಾಣ ಹಾಕಿ ಎಲ್ಲರಿಗೂ ಮೆಡಿಕಲ್ ಸೀಟು ಕೊಡಿಸುವ ಉದ್ದೇಶದಿಂದ ಜಾರಿಗೆ ಬಂದ ನೀಟ್ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ. ನವೀನ್ ಸಾವಿನಿಂದ ಜ್ಞಾನೋದಯ ಆಗಿದೆ ಎನ್ನುವ @CM of Karnataka ಅವರು ವೈದ್ಯ ಶಿಕ್ಷಣ ಶುಲ್ಕ ಕಡಿಮೆ ಮಾಡುವ ಹೇಳಿಕೆ ನೀಡುತ್ತಾರೆ. ಆದರೆ, ನೀಟ್ ವಿರುದ್ಧ ಚಕಾರ ಎತ್ತುತ್ತಿಲ್ಲ, ಯಾಕೆ? ಎಂದು ಹೆಚ್‌ಡಿಕೆ ಪ್ರಶ್ನೆ ಮಾಡಿದ್ದಾರೆ.
ಖಾಸಗಿ ಕಾಲೇಜುಗಳಲ್ಲಿ ವೈದ್ಯ ಶಿಕ್ಷಣ ದುಬಾರಿ ಎಂದು ಸ್ವತಃ ಮುಖ್ಯಮಂತ್ರಿಯೇ ಒಪ್ಪಿದ್ದಾರೆ. ಹಾಗಾದರೆ, ಅಂತಹ ಕಾಲೇಜುಗಳಿಗೆ ಶಕ್ತಿ ತುಂಬುತ್ತಿರುವುದು ಏಕೆ?. ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಕನ್ನಡದ ಮಕ್ಕಳಿಗೆ ಸೀಟು ಸಿಗುತ್ತಿಲ್ಲ. ಟ್ಯೂಷನ್ಗಳಿಗೆ ಲಕ್ಷ ಲಕ್ಷ ಕಟ್ಟುವುದು ಬಡ, ಮಧ್ಯಮ ವರ್ಗದ ಮಕ್ಕಳಿಗೆ ಸಾಧ್ಯವಿಲ್ಲ ಎಂದಿದ್ದಾರೆ.