ಬೆಂಗಳೂರು:ಕಟ್ಟುವುದು ಮನುಷ್ಯತ್ವ, ಕೆಡವುದು ರಾಕ್ಷಸತ್ವ. ನಿಮಗೆ ಕೆಡವಿ ಗೊತ್ತೇ ವಿನಃ ಕಟ್ಟಿ ಗೊತ್ತಿಲ್ಲ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕೆಂದು ಹೇಳಿ ನಮ್ಮ ಮನೆ ಬಾಗಿಲಿಗೆ ಬಂದ ಕಾಂಗ್ರೆಸ್ ನಾಯಕರು ಸರ್ಕಾರದ ನೇತೃತ್ವ ವಹಿಸಿ ಎಂದರು. ಹಾಗಾದರೆ, ಪಕ್ಷದ ನಿರ್ಧಾರಕ್ಕೂ ನಿಮಗೂ ಸಂಬಂಧ ಇಲ್ಲವಾ ಮಿಸ್ಟರ್ ಸಿದ್ದಸೂತ್ರಧಾರ? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಟ್ವೀಟ್ ವಾರ್ ಮುಂದುವರೆಸಿರುವ ಹೆಚ್ಡಿಕೆ, ನಾನು ಜೆಡಿಎಸ್ನವರ ಮನೆ ಬಾಗಿಲಿಗೆ ಹೋಗಿಲ್ಲ ಎನ್ನುತ್ತೀರಿ, ನಿಮ್ಮನ್ನು ಕರೆದವರು ಯಾರು?. ನಾವೇನು ಎಲೆ-ಅಡಿಕೆ ಕೊಟ್ಟು ಆಹ್ವಾನ ಕೊಟ್ಟೆವಾ?. ಬಂದು ಬೆಂಬಲದ ಭಿಕ್ಷೆ ಬೇಡಿದವರು ಯಾರು?. ದೆಹಲಿ ನಾಯಕರು ನಮ್ಮ ಮನೆ ಬಾಗಿಲಲ್ಲಿ ನಿಂತಿದ್ದಾಗಲೇ, ಮೈತ್ರಿಗೆ ಕುಣಿಕೆ ಬಿಗಿಯಲು ಯತ್ನಿಸಿದವರು ಯಾರು, ಮಿಸ್ಟರ್ ಟರ್ಮಿನೇಟರ್? ಎಂದು ಪ್ರಶ್ನಿಸಿದ್ದಾರೆ.
ಹೈಕಮಾಂಡ್ ಮಟ್ಟದಲ್ಲಿ ಮಾತುಕತೆ ನಡೆದಿದೆ. ನನ್ನ ಹಂತದಲ್ಲಿ ಅಲ್ಲ ಎನ್ನುತ್ತೀರಿ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ಮಾತಿಗೆ ನಿಮ್ಮಲ್ಲಿ ಕಿಮ್ಮತ್ತಿಲ್ಲಾ?. ಹಾಗಾದರೆ, ಸಿಎಲ್‌ಪಿಯನ್ನೇ ಅಡ್ಡಡ್ಡ 'ಸೀಳಿ' ಬೆಂಬಲಿಗ ಶಾಸಕರು ಬಿಜೆಪಿಗೆ ಹೋಗಲು ದುಷ್ಪ್ರೇರಣೆ ಕೊಟ್ಟವರು ಯಾರು?.
ವರಿಷ್ಠರು ತಂದ ಸರ್ಕಾರವನ್ನೇ ತೆಗೆದಿರಿ. ಬಿಜೆಪಿ ಸರ್ಕಾರ ಬರಲು ಕಾರಣರಾದಿರಿ. ಈಗ ಸುಳ್ಳಿಗೆ ಸುಳ್ಳು ಪೋಣಿಸುತ್ತಿದ್ದೀರಿ. ಬಿಜೆಪಿ ಸರ್ಕಾರ ಬರಲು ಶಾಸಕರ ಟೀಂ ರೆಡಿ ಮಾಡಿದವರು ಯಾರು?. ಇಷ್ಟೆಲ್ಲಾ ʼಸಿದ್ದಕಲೆʼ ಎಲ್ಲಿಂದ ಬಂತು ಮಿಸ್ಟರ್ ಸಿದ್ದಕಲಾನಿಪುಣಪ್ಪಾ? ಎಂದು ಕುಟುಕಿದ್ದಾರೆ.
ಹೈಕಮಾಂಡ್ ನಿರ್ಧಾರಕ್ಕೂ ಗುನ್ನ, ಅಹಿಂದದ ಹೆಸರಿನಲ್ಲಿ ದಲಿತ ನಾಯಕರಾದ ಖರ್ಗೆ ಅವರಿಗೂ ಖೆಡ್ಡಾ, ಡಾ. ಪರಮೇಶ್ವರ ಅವರಿಗೆ ಸೋಲಿನ ಸುಳಿ, ಈಗ ನೋಡಿದರೆ, 'ಬಂಡೆ'ಯ ಕೆಳಗೂ ಡೈನಾಮೈಟ್ ಇಡುತ್ತಿರುವ ಅನೈತಿಕ, ನೀಚ, ನಿಕೃಷ್ಟ, ಹೀನ ರಾಜಕಾರಣಕ್ಕೆ ನಾಂದಿ ಹಾಡಿರುವ 'ಪರಮಪಾತಕ ಪರಾಕಾಷ್ಠೆ' ಯಾರು? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಜೆಡಿಎಸ್ ಬಿಜೆಪಿಯ ಬಿ ಟೀಂ ಅನ್ನುತ್ತೀರಿ. ಹಾಗಾದರೆ, ಆಡಳಿತ ಪಕ್ಷದಲ್ಲೇ ಕುಳಿತು ವಿರೋಧಿಗಳೊಂದಿಗೆ ಕುಮ್ಮಕ್ಕಾಗಿ ಬೆನ್ನಿಗಿರಿದ ʼಬ್ರೂಟಸ್ʼ ಯಾರು? ಮೈತ್ರಿ ಸರ್ಕಾರಕ್ಕೆ ಮೊದಲ ದಿನದಿಂದಲೇ ಮಹೂರ್ತ ಇಟ್ಟವರು ಯಾರು?. ಸ್ವಯಂ ಘೋಷಿತ ಅಹಿಂದ ನಾಯಕರೇ ನಿಮ್ಮೊಳಗಿದೆ ಕಾರ್ಕೋಟಕ 'ವಿಷ'. ಆ ವಿಷವೇ ನಿಮಗೆ ಮುಳುವು ಎಂದು ಕಿಡಿಕಾರಿದ್ದಾರೆ.
ಅಹಾ!! 'ಕೋಲಾರದಲ್ಲಿ ಕಲರ್‌ಫುಲ್ ಸುಳ್ಳುಗಳ ಸರಮಾಲೆ'ಯನ್ನೇ ಸೃಷ್ಟಿಸಿ ಕೃತಾರ್ಥರಾಗಿದ್ದೀರಿ. 'ಅಡ್ಜಸ್ಟ್‌ಮೆಂಟ್ ರಾಜಕಾರಣ'ದ ಹರಿಕಾರರು ನೀವಲ್ಲವೇ? ವಿನಾಶಕಾಲೇ ವಿಪರೀತ ಸುಳ್ಳು!! ಎಂದು ಹೆಚ್ಡಿಕೆ ವ್ಯಂಗ್ಯವಾಡಿದ್ದಾರೆ.