ಬೆಂಗಳೂರು :ಸುಳ್ಳನ್ನು ಪದೇಪದೆ ಹೇಳುತ್ತಾ ಜನರನ್ನು ದಾರಿತಪ್ಪಿಸುವ ʼಸಿದ್ದಕಲೆʼ ಅವರಿಗೆ ಚೆನ್ನಾಗಿ ಸಿದ್ಧಿಸಿದೆ ಎಂಬುದನ್ನು ನಾನು ಬಲ್ಲೆ. ನಿತ್ಯವೂ ʼಸುಳ್ಳಿನ ಜಪʼ ಮಾಡುವುದೇ ಅವರಿಗೆ ನಿತ್ಯ ಕಾಯಕ. ಇದು ಸತ್ಯಕ್ಕೆ ಮತ್ತು ರಾಜ್ಯಕ್ಕೆ ಎಸಗುವ ಅಪಚಾರ ಹಾಗೂ ಶಾಂತ ಸಮಾಜವನ್ನು ಒಡೆಯುವ ಹುನ್ನಾರ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ನಾನು ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿದ್ದಾಗ, ಸಿದ್ದರಾಮಯ್ಯ ಅವರು ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದರು. ಆಗ ಕಾಂತರಾಜು ಅವರ ವರದಿಯ ಬಗ್ಗೆ ಅವರು ಪ್ರಸ್ತಾಪವನ್ನೇ ಮಾಡಲಿಲ್ಲ. ಹಾಗೆ ಚರ್ಚೆ ಮಾಡುವ ಧೈರ್ಯವನ್ನೇಕೆ ತೋರಲಿಲ್ಲ? ಹೀಗಾಗಿ ಕೋಪದ ಪ್ರಶ್ನೆ ಎಲ್ಲಿಂದ ಬರುತ್ತದೆ? ಎಂದು ತಿರುಗೇಟು ನೀಡಿದ್ದಾರೆ.
ಆ ವರದಿಯಲ್ಲಿ ಸಹಿಯೇ ಇಲ್ಲ ಎಂದು ಸ್ವತಃ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರೇ ಹೇಳಿ ಬಿಟ್ಟಿದ್ದಾರೆ. ಮುಖ್ಯಮಂತ್ರಿ ಆಗಿದ್ದವರು, ಈಗ ಪ್ರತಿಪಕ್ಷ ನಾಯಕರೂ ಆಗಿರುವ ʼರಾಜಕೀಯ ಪಂಡಿತʼರಿಗೆ ಹೇಳಿಕೆ ನೀಡುವ ಮುನ್ನ ಆ ಬಗ್ಗೆ ಕನಿಷ್ಠ ಸಾಮಾನ್ಯ ಪ್ರಜ್ಞೆ ಇರಬೇಕಾಗಿತ್ತು.