ಬೆಂಗಳೂರು: ಮನೆಯಲ್ಲಿ ನೋಟು ಎಣಿಸುವ ಯಂತ್ರ ಇಟ್ಟುಕೊಂಡವನು ನಾನಲ್ಲ. ನಿಮ್ಮ ಮೇಲೆ ಅತ್ಯಾಚಾರ ನಡೆದರೆ ಸರ್ಕಾರ ಏನು ಮಾಡುವುದಕ್ಕಾಗುತ್ತೆ ಎಂದು ವರದಿಗಾರ್ತಿಗೆ ಪೆಕರನಂತೆ ಪ್ರಶ್ನಿಸಿದವನು ನಾನಲ್ಲ ಎಂದು ಸಚಿವ ಕೆ ಎಸ್ ಈಶ್ವರಪ್ಪನವರಿಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್ ನಿನ್ನೆ ಮುಸ್ಲಿಂ ಸಮುದಾಯದ ಸಭೆಯೊಂದರಲ್ಲಿ ಕುಮಾರಸ್ವಾಮಿ ಅವರು, ಸಂಸದ ತೇಜಸ್ವಿ ಸೂರ್ಯ ಹಾಗೂ ಚಕ್ರವರ್ತಿ ಸೂಲಿಬೆಲೆ ಅವರು ಯುಗಪುರುಷರೇ ಎಂದು ಟೀಕಿಸಿದ್ದರು. ಇದಕ್ಕೆ ಟ್ವೀಟ್ನಲ್ಲಿ ಈಶ್ವರಪ್ಪ ತಿರುಗೇಟು ನೀಡಿದ್ದರು. ಇದಕ್ಕೆ ಪ್ರತಿಯಾಗಿ ಕುಮಾರಸ್ವಾಮಿ ಟ್ವೀಟ್ನಲ್ಲಿ ತಿರುಗೇಟು ಕೊಟ್ಟಿದ್ದಾರೆ.
ಉಪ ಮುಖ್ಯಮಂತ್ರಿ ಹುದ್ದೆ ಯಾರಿಗೆ ಇಷ್ಟವಿಲ್ಲ?, ವಯಸ್ಸಿಗೆ ಬಂದವರಿಗೆಲ್ಲರಿಗೂ ನಟಿ ಐಶ್ವರ್ಯ ರೈ ಬೇಕೆಂದು ಬಯಸುತ್ತಾರೆ. ಇರುವುದು ಒಬ್ಬಳೇ ಐಶ್ವರ್ಯ ರೈ ತಾನೇ?. ಡಿಸಿಎಂ ಹುದ್ದೆಯ ಬಗ್ಗೆ ಕೀಳು ಅಭಿರುಚಿಯಿಂದ ಮಾತನಾಡಿದವನು ನಾನಲ್ಲ ಎಂದಿದ್ದಾರೆ.
ನನ್ನ ಕ್ಷೇತ್ರದಲ್ಲಿ 55 ರಿಂದ 60 ಸಾವಿರ ಮುಸ್ಲಿಂರ ವೋಟುಗಳಿವೆ. ಈವರೆಗೆ ಒಬ್ಬ ಮುಸ್ಲಿಂಮನಿಗೂ ನಮಸ್ಕಾರ ಹೊಡೆದು ವೋಟ್ ಕೇಳಿಲ್ಲ. ಆದರೂ 47 ಸಾವಿರ ಮತಗಳ ಅಂತರದಿಂದ ಗೆದ್ದಿದ್ದೇನೆ. ರಾಷ್ಟ್ರ ಭಕ್ತ ಮುಸ್ಲಿಂ, ಬಿಜೆಪಿಗೆ ವೋಟ್ ಹಾಕ್ತಾನೆ. ಪಾಕಿಸ್ತಾನದ ಪರ ಇರೋ ಮುಸ್ಲಿಂ, ಬಿಜೆಪಿಗೆ ವೋಟ್ ಹಾಕಲು ಹಿಂದೆ ಮುಂದೆ ನೋಡ್ತಾರೆ ಎಂದವನು ನಾನಲ್ಲ ಎಂದು ಕುಟುಕಿದ್ದಾರೆ.
ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್ ಕುಂದಗೋಳ ವಿಧಾನಸಭೆ ಉಪಚುನಾವಣೆ ಪ್ರಚಾರದ ಸಂದರ್ಭದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ, ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವಾಗಿತ್ತು. ಈ ಬಗ್ಗೆ ಸಿದ್ದರಾಮಯ್ಯ ನಾನು ಏನು ಮಾಡಬೇಕು ಎಂದಿದ್ದರು. ಒಂದು ವೇಳೆ ಸಿದ್ದರಾಮಯ್ಯ ಅವರ ಮೊಮ್ಮಗಳ ಮೇಲೆ ಅತ್ಯಾಚಾರ ನಡೆದರೆ ಏನು ಮಾಡುತ್ತಾರೆ ಎಂಬ ಕೀಳು ಮಟ್ಟದ ಹೇಳಿಕೆ ನೀಡಿದವನು ನಾನಲ್ಲ. ಇಂತಹ ಅದ್ಭುತವಾದ ಅಣಿಮುತ್ತುಗಳನ್ನು ಉದುರಿಸಿದ ತಮ್ಮಿಂದ, ಯುಗಪುರುಷ ಎಂಬ ಸರ್ಟಿಫಿಕೇಟ್ ಪಡೆಯುವ "ಮೂರ್ಖ ಪುರುಷ" ನಾನಲ್ಲ. ದಿಢೀರ್ ನಿದ್ದೆಯಿಂದ ಎದ್ದಂತೆ ಹಳೆಯ ಹೇಳಿಕೆಗೆ ಟ್ವೀಟ್ ಮಾಡುವವನು ನಾನಲ್ಲ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.