ಬೆಂಗಳೂರು: ದೇಶದ ಸ್ವಾತಂತ್ರ್ಯಕ್ಕೆ ಬಿಜೆಪಿ, ಆರ್ಎಸ್ಎಸ್ ಕೊಡುಗೆ ಏನು ಇಲ್ಲ. ಕೇವಲ ಹಿಂದುತ್ವ ಅಜೆಂಡಾ ಇಟ್ಟುಕೊಂಡು ಬಿಜೆಪಿ ಕೆಲಸ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ, ಎನ್ಆರ್ಸಿ ವಿರೋಧಿಸಿ ನಗರದ ಖುದ್ದೂಸ್ ಸಾಹೇಬ್ ಈದ್ಗಾ ಹಾಲ್ನಲ್ಲಿ ಇಂದು ರಾತ್ರಿ ಜಾಯಿಂಟ್ ಆಕ್ಷನ್ ಕಮಿಟಿ ಕರ್ನಾಟಕ ಆಯೋಜನೆ ಮಾಡಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈಗ ಬಿಜೆಪಿ ಸಿಎಎ ಮೂಲಕ ಮುಸ್ಲಿಂ ವಿರುದ್ಧ ಕೆಲಸ ಮಾಡುತ್ತಿದೆ. ಯಾವುದೋ ಒಂದು ಸಮುದಾಯದ ಮೇಲೆ ಕೆಟ್ಟ ಹೆಸರು ತರುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದು ದೂರಿದರು.
ಮಂಗಳೂರಿನಲ್ಲಿ ಗಲಾಟೆಗೆ ಬಿಜೆಪಿ ಕಾರಣ. ನಿನ್ನೆ ಮಂಗಳೂರಿನಲ್ಲಿ ಪ್ರತಿಭಟನೆ ನಡೆದಿದೆ. ಏಕೆ ಗಲಾಟೆ ಆಗಿಲ್ಲ. ಮೊದಲ ಬಾರಿ ಯಾಕೆ ಗಲಾಟೆ ಆಯ್ತು. ಮಂಗಳೂರು ಗಲಾಟೆಗೆ ಪೊಲೀಸರು ಕಾರಣ. ವಿಧಾನಸಭೆಯಲ್ಲಿ ಇದನ್ನು ನಾನು ಚರ್ಚೆ ಮಾಡುತ್ತೇನೆ. ಅಧಿವೇಶನ ನಡೆಯಲು ಬಿಡುವುದಿಲ್ಲ. ಈ ಬಗ್ಗೆ ಸಮಗ್ರ ಚರ್ಚೆ ಮಾಡುತ್ತೇನೆ ಎಂದರು.
ಮಂಗಳೂರಿನಲ್ಲಿ ನಡೆದ ಗಲಭೆಯಲ್ಲಿ 80 ಜನ ಪೊಲೀಸರು ಗಾಯಗೊಂಡಿದ್ದಾರೆಂದು ಪೊಲೀಸ್ ಅಧಿಕಾರಿ ಹೇಳುತ್ತಾರೆ. ಕೊನೆಗೆ 15 ಜನ ಪೊಲೀಸರಿಗೆ ಮಾರಣಾಂತಿಕ ಹಲ್ಲೆ ಆಗಿದೆ ಅಂತ ಹೇಳಿದರು. ಕೊನೆಗೆ ನಾನೇ ನೋಡಲು ಹೋದರೆ ಒಬ್ಬರೋ, ಇಬ್ಬರೂ ಗಾಯಗೊಂಡಿದ್ದಾರೆ ಅಷ್ಟೇ ಜನರು ಗಾಯಗೊಂಡಿರುವ ಬಗ್ಗೆ ಸ್ವಲ್ಪವೂ ಪೊಲೀಸರು ಮಾತಮಾಡಲಿಲ್ಲ ಎಂದು ದೂರಿದರು.
ಬಿಜೆಪಿ ಒಂದು ಸಮುದಾಯವನ್ನು ಟಾರ್ಗೆಟ್ ಮಾಡಲು ಹೀಗೆ ಮಾಡುತ್ತಿದೆ. ಇದರಿಂದ ದಲಿತರಿಗೂ ಸಮಸ್ಯೆ ಆಗುತ್ತಿದೆ. ಪ್ರಧಾನಿ ಮೋದಿ ಅವರು ಜಿಯಾ ಉಲ್ಲಾ ಮಾದರಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಅಂತಾ ಹಿಂದೂಗಳು ಹೇಳುತ್ತಿದ್ದಾರೆ. ಸಿಎಎ ಪ್ರಾರಂಭ ಆಗಿರುವುದು ಅಸ್ಸಾಂನಲ್ಲಿ. ಈಗಾಗಲೇ ಅಲ್ಲಿ ಕೆಲಸ ಮಾಡಿದ್ದಾರೆ. ನಿರಾಶ್ರಿತರ ಕೇಂದ್ರವೂ ಮಾಡಿದ್ದಾರೆ. ಇದಕ್ಕೆ ಸಾಕಷ್ಟು ಹಣ ಖರ್ಚು ಮಾಡಿದ್ದಾರೆ. 19 ಲಕ್ಷ ಜನ ಎನ್ಆರ್ಸಿಗೆ ಸೇರಿಸಿಕೊಂಡಿದ್ದಾರೆ. ಇವರಿಗೆ ಊಟ, ರಕ್ಷಣೆ ಕೊಡಲು ಕೋಟಿ ಕೋಟಿ ಹಣ ಬೇಕಾಗುತ್ತದೆ. ಈ ಕಾಯ್ದೆ ಜಾರಿಯಾದರೆ, ದೇಶದಾದ್ಯಂತ 7.5 ಕೋಟಿ ಜನರಿಗೆ ಅನ್ಯಾಯ ಆಗುತ್ತದೆ. ಎನ್ಪಿಆರ್ ಮತ್ತು ಎನ್ಆರ್ಸಿಗೆ ಒಂದಕ್ಕೊಂದು ಲಿಂಕ್ ಇದೆ. ಇದಾದ ಮೇಲೆ ಸಿಎಎ ಜಾರಿಗೆ ತರುತ್ತಾರೆ. ಸಂವಿಧಾನವನ್ನು ತಿರುಚುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದು ಟೀಕಿಸಿದರು.
ಸಿಎಎ ಬಗ್ಗೆ ಜಾಗೃತಿ ಮೂಡಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಬರುತ್ತಿದ್ದಾರೆ. ಮೊದಲು ನೆರೆ ಪರಿಹಾರ ಕೊಡಲಿ. ಜಾಗೃತಿ ಕೆಲಸ ಆಮೇಲೆ ಮಾಡಲಿ. ಕೃಷ್ಣ ಮೇಲ್ದಂಡೆ ಯೋಜನೆಗೆ ಹಣ ಕೊಡಿ. ರಾಜ್ಯದ ನೀರಾವರಿ ಸಮಸ್ಯೆಗಳನ್ನು ಪರಿಹಾರ ಮಾಡಲಿ. ರಾಜ್ಯಕ್ಕೆ ಕೊಡಬೇಕಾದ ಅನುದಾನ ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದರು.
ಬಿಜೆಪಿ ಅವರು ಮನಮೋಹನ್ ಸಿಂಗ್ ಈ ಕಾಯ್ದೆ ಜಾರಿಗೆ ತಂದಿದ್ದು ಅಂತ ಹೇಳ್ತಾರೆ. ಆದರೆ ಇದನ್ನು ಜಾರಿಗೆ ತರುವ ಹಾಗೆ ಮಾಡಿದವರು ವಾಜಪೇಯಿ ಅವರು. ಅಲ್ಪಸಂಖ್ಯಾತರ ಶಕ್ತಿ ಕುಂದಿಸಲು ಹಿಡನ್ ಅಜೆಂಡಾ ಇಟ್ಟುಕೊಂಡು ಬಿಜೆಪಿ ಕೆಲಸ ಮಾಡುತ್ತಿದೆ ಎಂದು ದೂರಿದರು.
ಸಾವರ್ಕರ್ಗೆ ಭಾರತ ರತ್ನ ಕೊಡೋದಕ್ಕೆ ಬಿಜೆಪಿ ಮುಂದಾಗಿದೆ. ಸಾವರ್ಕರ್ಗೆ ಭಾರತರತ್ನ ಕೊಡುವ ಬದಲು ನಾಥೂರಾಮ್ ಗೋಡ್ಸೆಗೆ ಬಿಜೆಪಿ ಅವರು ಭಾರತರತ್ನ ಕೊಡಲಿ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಸರ್ಕಾರ ತನ್ನ ತಪ್ಪು ಮುಚ್ಚಿಕೊಳ್ಳಲು ಈ ಕಾಯ್ದೆ ಜಾರಿಗೆ ತಂದಿದೆ. ಜಮ್ಮು ಕಾಶ್ಮೀರದಲ್ಲಿ 370 ರದ್ದು ಮಾಡಿ ಏನೋ ಸಾಧನೆ ಮಾಡಿದ್ದೇವೆ ಅಂತ ಬಿಜೆಪಿ ಹೇಳುತ್ತಿದೆ. ಜಮ್ಮು ಕಾಶ್ಮೀರದ ಜನರ ಜೊತೆ ಬಿಜೆಪಿ ಅವರು ಚೆಲ್ಲಾಟ ಆಡಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಮುಖಂಡರನ್ನ ಗೃಹ ಬಂಧನದಲ್ಲಿಟ್ಟಿದ್ದಾರೆ. ಅಲ್ಲಿ 370 ಜಾರಿಗೆ ತಂದು ಏನು ಸಾಧನೆ ಮಾಡಿದರು. ಇಂಟರ್ ನೆಟ್ ಕಡಿತ ಮಾಡಿ ದೇಶದ ಆರ್ಥಿಕತೆಗೆ ನಷ್ಟ ಮಾಡಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ವಿದ್ಯಾಭ್ಯಾಸ ಮಾಡಲು ಆಗುತ್ತಿಲ್ಲ ಎಂದು ಹೇಳಿದರು.
ದೇಶದ ಹಿತದಿಂದ ರಾಜಕೀಯ ಬದಿಗಿಟ್ಟು ಹೋರಾಟ ಮಾಡಬೇಕಿದೆ. ಈ ವಿಚಾರವಾಗಿ ನಾನು ಒಗ್ಗಟ್ಟಿನಿಂದ ಕೆಲಸ ಮಾಡಲು ನಾನು ಸಿದ್ಧ. ದೇಶದಲ್ಲಿ ಇರುವ ನೂರಾರು ಸಮಸ್ಯೆ ಬಗ್ಗೆ ಬಿಜೆಪಿ ತಲೆ ಕೆಡಿಸಿಕೊಳ್ಳಲಿ. ಅದು ಬಿಟ್ಟು ಒಂದು ಸಮಾಜವನ್ನು ತುಳಿಯಲು ಹೋದ್ರೆ ಸಹಿಸಲು ಸಾಧ್ಯವಿಲ್ಲ. ಬಿಜೆಪಿಗೂ ಈಗ ಭಯ ಬಂದಿದೆ. ಜನರೇ ಬಿಜೆಪಿ ವಿರುದ್ಧ ಎದ್ದು ನಿಂತಿದ್ದಾರೆ. ಸಂವಿಧಾನದ ವ್ಯವಸ್ಥೆ ನಾಶ ಮಾಡಲು ಬಿಜೆಪಿ ಹೊರಟಿದೆ. ಹಿಂದೂ, ಮುಸ್ಲಿಂ, ಕ್ರೈಸ್ತ ಅನ್ನುವ ಭಾವನೆ ಇರಬಾರದು. ಮನೆ ಮನೆಗೆ ಹೋಗಿ ಇದನ್ನು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಮಾಧ್ಯಮಗಳು ಸಿಎಎ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುವಲ್ಲಿ ವಿಫಲವಾಗಿವೆ. ಹಿರಿಯ ಪತ್ರಕರ್ತರೇ ಇದನ್ನು ಬರೆದಿದ್ದಾರೆ. ಮೈಕ್ರೋ ಸಾಫ್ಟ್ ಸಿಇಓ ಇದರ ವಿರುದ್ಧ ಮಾತಾಡ್ತಾರೆ. ಸಿಎಎ ವಿರುದ್ಧದ ಹೋರಾಟಕ್ಕೆ ನಮ್ಮ ಪಕ್ಷ ಸದಾ ಜೊತೆಗಿರುತ್ತೆ ಎಂದು ಅಲ್ಪಸಂಖ್ಯಾತ ಮುಖಂಡರಿಗೆ ಆಶ್ವಾಸನೆ ನೀಡಿದರು.
ಎಸ್ಡಿಪಿಐ ಮೇಲೆ ಕ್ರಮದ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಕಿಡಿಗೇಡಿಗಳ ಕೃತ್ಯಕ್ಕೆ ಧರ್ಮದ ಹೆಸರು ಸೇರಿಸಬೇಡಿ. ಒಂದು ಸಮುದಾಯದ ಮೇಲೆ ದೂರಬೇಡಿ. ಸತ್ಯಾಸತ್ಯತೆ ತಿಳಿದು ಕ್ರಮ ತೆಗೆದುಕೊಳ್ಳಿ ಎಂದು ಪೊಲೀಸ್ ಅಧಿಕಾರಿಗಳಿಗೆ ಸಲಹೆ ಮಾಡಿದರು.ಚಕ್ರವರ್ತಿ ಸೂಲಿಬೆಲೆ, ಸಂಸದ ತೇಜಸ್ವಿ ಸೂರ್ಯ ಮಹಾನ್ ದೇಶಭಕ್ತರೇನು ಅಲ್ಲ. ಯುಗಪುರುಷರೂ ಅಲ್ಲ. ಅವರನ್ನು ಹುತಾತ್ಮ ಮಾಡಲು ಹೋಗಿದ್ದಾರಾ? ಎಂದು ಪ್ರಶ್ನಿಸಿದರು.
ಸಂಸದ ತೇಜಸ್ವಿ ಸೂರ್ಯ ಬೆಂಗಳೂರಿಗೆ ನೀಡಿರುವ ಕೊಡುಗೆ ಏನು?. ಏನು ಸಾಧನೆ ಮಾಡಿದ್ದಾರೆ ಅಂತ ಇವರನ್ನು ಕೊಲ್ಲೋಕೆ ಹೋಗುತ್ತಾರೆ. ಯಾರೋ ತಪ್ಪು ಮಾಡಿದರು ಅಂತ ಒಂದು ಸಮುದಾಯದ ಮೇಲೆ ತಪ್ಪು ಹೊರಿಸಬೇಡಿ. ತನಿಖೆ ಮಾಡಿ ಸತ್ಯ ಇದ್ದರೆ ಯಾವುದೇ ಸಂಘಟನೆ ಇದ್ದರೂ ಕ್ರಮ ತೆಗೆದುಕೊಳ್ಳಲಿ ಎಂದರು.
ವಿಧಾನಪರಿಷತ್ ಸದಸ್ಯ ಬಿ.ಎಂ. ಫಾರೂಕ್, ನಿವೃತ್ತ ನ್ಯಾ. ಗೋಪಾಲಗೌಡ ಮತ್ತಿತರ ಮುಸ್ಲಿಂ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.