ಬೆಂಗಳೂರು:ಮಾಜಿ ಸಿಎಂ, ಹಾಲಿ ಪ್ರತಿಪಕ್ಷ ನಾಯಕರ ನಾಲಿಗೆ ಮೇಲೆ ರಾಜ್ಯ ನೀರಾವರಿ ಬಗ್ಗೆ ಸೃಷ್ಟಿ ಆಗುತ್ತಿರುವ 'ಸುಳ್ಳಿನ ಸರಮಾಲೆ'ಯು ಜನತೆಗೆ ಯಾಮಾರಿಸಿ ಬೇಳೆ ಬೇಯಿಸಿಕೊಳ್ಳುವ 'ರಾಜಕೀಯ ಹುಂಬತನ'ವಲ್ಲದೇ ಮತ್ತೇನೂ ಅಲ್ಲ. ಸತ್ಯಕ್ಕೆ ಸಮಾಧಿ ಕಟ್ಟಿ 'ಸುಳ್ಳಿನಯಾತ್ರೆ'ಗೆ ಹೊರಟವರ ಜಾತಕವನ್ನು ದಾಖಲೆಗಳೇ ಬೆತ್ತಲು ಮಾಡುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, 1989ರಲ್ಲಿ ತಮಿಳುನಾಡು ಒತ್ತಡಕ್ಕೆ ಮಣಿದು ವಿ.ಪಿ.ಸಿಂಗ್ ಸರ್ಕಾರ ಕಾವೇರಿ ಟ್ರಿಬ್ಯೂನಲ್ ರಚಿಸಿತ್ತು. ಆಗ ವೀರೇಂದ್ರ ಪಾಟೀಲರು ಸಿಎಂ ಆಗಿದ್ದರೆ, ಪುಟ್ಟಸ್ವಾಮಿ ಗೌಡರು ನೀರಾವರಿ ಮಂತ್ರಿ. ಈ ಟ್ರಿಬ್ಯೂನಲ್ ಬೇಡವೇ ಬೇಡ ಎಂದು ದನಿಯೆತ್ತಿದ ಏಕೈಕ ನಾಯಕರು ದೇವೇಗೌಡರು. ಆದರೆ, ಅವರ ಮಾತನ್ನು ಯಾರೂ ಕೇಳಲಿಲ್ಲ. ಈಗ 'ಮಿ.ಸುಳ್ಳಯ್ಯ' ಹೊಸ ಕಥೆ, ಚಿತ್ರಕಥೆ ಬರೆದಿದ್ದಾರೆ. 1968ರಲ್ಲೇ ಮೇಕೆದಾಟು ಯೋಜನೆಗೆ ಕಾಂಗ್ರೆಸ್ ಪ್ರಯತ್ನಿಸಿತ್ತಂತೆ ಎಂದು ಹೇಳಿದ್ದಾರೆ ಎಂದು ಟೀಕಿಸಿದ್ದಾರೆ.
2017ರಲ್ಲೇ ಕಾಂಗ್ರೆಸ್ ಸರ್ಕಾರ ವಿಸ್ತೃತ ಯೋಜನಾ ವರದಿ(Detailed project report-DPR) ಸಿದ್ಧಪಡಿಸಿ 5,912 ಕೋಟಿ ರೂ. ಯೋಜನಾ ವೆಚ್ಚ ನಿಗದಿ ಮಾಡಿತ್ತು. ಸಮ್ಮಿಶ್ರ ಸರ್ಕಾರದಲ್ಲಿ ಜಲ ಸಂಪನ್ಮೂಲ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಮತ್ತೆ 9,000 ಕೋಟಿ ರೂ. ಮೊತ್ತದ ವಿಸ್ತೃತ DPR ಸಿದ್ಧಪಡಿಸಿ ಕೇಂದ್ರಕ್ಕೆ ಕಳುಹಿಸಿದ್ದರಂತೆ.
ಅಬ್ಬಾ..! 'ಸಿದ್ದಸುಳ್ಳುಶೂರ'. ಸುಳ್ಳು ಸೃಷ್ಟಿಗೊಂದು ಆಸ್ಕರ್ ಇರಬೇಕಿತ್ತು. ಮೇಕೆದಾಟು ಸಮಗ್ರ ಯೋಜನಾ ವರದಿ - DPR ಸಿದ್ಧವಾಗಿ ಕೇಂದ್ರಕ್ಕೆ ಸಲ್ಲಿಕೆ ಆಗಿದ್ದು, 2018ರಲ್ಲಿ ನಾನು ಸಿಎಂ ಆಗಿದ್ದಾಗಲೇ. ಇದರಲ್ಲಿ ಡಿಕೆಶಿ ಪಾತ್ರವೇನೂ ಇರಲಿಲ್ಲ. ಈ ಸತ್ಯವನ್ನು 'ಸಿದ್ದಹಸ್ತರು' ಮುಚ್ಚಿಟ್ಟ ಪರಮಾರ್ಥವೇನು? ಎಂದು ಹೆಚ್ಡಿಕೆ ಪ್ರಶ್ನಿಸಿದ್ದಾರೆ.
ನನ್ನ ಸಂಪುಟದಲ್ಲಿ ಜಲಸಂಪನ್ಮೂಲ ಮಂತ್ರಿಯಾಗಿದ್ದವರು ಮೇಕೆದಾಟು ವಿಚಾರದಲ್ಲಿ ನಾನು ಮತ್ತು ನನ್ನ ಸಂಪುಟ ಸಹೋದ್ಯೋಗಿ ಹೆಚ್.ಡಿ.ರೇವಣ್ಣ ಅವರು. ಆಗಿನ ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದ್ದಾಗ ಎಲ್ಲಿದ್ದರು? ಜನರಿಗೆ ತಿಳಿಯಬೇಕಲ್ಲವೆ?. ನನ್ನ ಮನವಿ ಮೇರೆಗೆ ಅಂದು ಗಡ್ಕರಿ ಅವರು ತಕ್ಷಣವೇ DPR ಸಿದ್ಧಪಡಿಸಿ ಕಳಿಸಿ ಎಂದು ಹೇಳಿದ್ದರು.