ಬೆಂಗಳೂರು: ಸಿ.ಟಿ. ರವಿ ಅವರೇ, ಮನೆಯಲ್ಲಿ ಕೂತು ಪುಸ್ತಕ ಓದಿದರೆ ಸಾಲದು ಎಂದಿದ್ದೀರಿ. RSS ಬಗ್ಗೆ ಜ್ಞಾನಾರ್ಜನೆ, ಅಧ್ಯಯನ, ಸಂಶೋಧನೆ ಮಾಡಲು ಸಂಘದ ಶಾಖೆಗೆ ಬನ್ನಿ ಎಂದು ನನಗೆ ಆಹ್ವಾನ ಕೊಟ್ಟಿದ್ದೀರಿ. ನಿಮ್ಮ ಸಂಘದೊಳಗಿನ ವಾಸ್ತಾವಾಂಶಗಳನ್ನು ಪ್ರತ್ಯಕ್ಷವಾಗಿ ನೋಡಿದವರೇ ಬರೆದ ಪುಸ್ತಕ ಓದಿ ನನಗೆ ಅಲ್ಲಿನ ವ್ಯವಹಾರಗಳ ವಿರಾಟ ದರ್ಶನ ಆಗಿದೆ.
ಇನ್ನು ಶಾಖೆಯನ್ನೇ ಸೇರಿಕೊಂಡರೆ ಇನ್ನೆಷ್ಟು ಸತ್ಯ ಸಂಗತಿಗಳು ಗೊತ್ತಾಗಬಹುದು ನೀವೇ ಒಮ್ಮೆ ಊಹಿಸಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಸಿ.ಟಿ. ರವಿ ಅವರಿಗೆ ತಿರುಗೇಟು ನೀಡಿದ್ದಾರೆ.
ನಿನ್ನೆ ಟ್ವೀಟ್ ಮಾಡಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರಿಗೆ ಇಂದು ಟ್ವೀಟ್ ಮೂಲಕವೇ ಪ್ರತ್ಯುತ್ತರ ನೀಡಿದ ಹೆಚ್ಡಿಕೆ, ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಿದ್ದೀರಿ. ನಿಮ್ಮ ಪಕ್ಷ ಮತ್ತು ನಿಮ್ಮ ಸರ್ಕಾರದಲ್ಲಿ ತಾಂಡವವಾಡುತ್ತಿರುವ ಅಪರಿಮಿತ ಭ್ರಷ್ಟಾಚಾರ, ಕುಟುಂಬ ರಾಜಕಾರಣ, ಸ್ವಜನ ಪಕ್ಷಪಾತದ ಬಗ್ಗೆಯೂ ನೀವು ಹೇಳಬೇಕು. ಅದಕ್ಕೂ RSS ಶಾಖೆಯಲ್ಲೇ ತರಬೇತಿ ನೀಡಲಾಯಿತಾ? ಎಂದು ಪ್ರಶ್ನಿಸಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುವಂತಹ, ಆಪರೇಷನ್ ಕಮಲದಂತಹ, ಅನೈತಿಕ, ನಿರ್ಲಜ್ಜ, ನೀಚ ರಾಜಕಾರಣವನ್ನು RSS ಶಾಖೆಯಲ್ಲೇ ಕಲಿಸಲಾಯಿತಾ ಎಂಬುದನ್ನೂ ನೀವು ಜನರಿಗೆ ಹೇಳಬೇಕು ಸಿ.ಟಿ. ರವಿಯವರೇ? ಎಂದು ಹೆಚ್ಡಿಕೆ ವಾಗ್ದಾಳಿ ನಡೆಸಿದ್ದಾರೆ.