ಬೆಂಗಳೂರು: ಜಾತಿ, ಧರ್ಮದ ಹೆಸರಿನಲ್ಲಿ ಅಭಿವೃದ್ಧಿ ತಾರತಮ್ಯ ಮಾಡುವುದು ಹೇಯ, ರಾಕ್ಷಸಿ ಮನಸ್ಥಿತಿ ಎನ್ನದೇ ವಿಧಿ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಿಡಿ ಕಾರಿದ್ದಾರೆ. ಸರಣಿ ಟ್ವೀಟ್ ಮಾಡಿರುವ ಅವರು, ಸರ್ವ ಜನಾಂಗದ ಜನರನ್ನು ಸಮಭಾವದಿಂದ ಕಂಡು ಸರ್ವ ಜನಾಂಗದ ತೋಟ ನಿರ್ಮಿಸಿದವರು ನಾಡಪ್ರಭು ಕೆಂಪೇಗೌಡರು. ಪ್ರಭುಗಳು ಕಟ್ಟಿದ ಬೆಂಗಳೂರಿನ ಯಲಹಂಕದಲ್ಲಿ ಅಭಿವೃದ್ಧಿ ವಿಚಾರದಲ್ಲಿ ನಿರ್ದಿಷ್ಟವಾಗಿ ಒಂದು ಸಮುದಾಯವನ್ನೇ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿ, ಅವರು ವಾಸಿಸುವ ಬಡಾವಣೆಯನ್ನು ಕಡೆಗಣಿಸಿ ಅವರನ್ನು ಟಾರ್ಗೆಟ್ ಮಾಡಲಾಗಿದೆ ಎಂದು ದೂರಿದ್ದಾರೆ.
ಮಳೆಯಿಂದ ತೀವ್ರ ಹಾನಿಗೆ ತುತ್ತಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಶನಿವಾರ ಬ್ಯಾಟರಾಯನಪುರ, ಹೆಬ್ಬಾಳ, ಯಲಹಂಕ ವಿಧಾನಸಭೆ ಕ್ಷೇತ್ರಗಳನ್ನು ವೀಕ್ಷಣೆ ಮಾಡಿದ್ದೆ. ಆಗ ನನಗೆ 'ರಿಪಬ್ಲಿಕ್ ಆಫ್ ಯಲಹಂಕ'ದ ಮಹಾದರ್ಶನವೇ ಆಯಿತು ಎಂದು ವಾಗ್ದಾಳಿ ನಡೆಸಿದರು. ಯಲಹಂಕದ ಕೋಗಿಲು ಕ್ರಾಸ್ ಬಳಿಯ ಕೇಂದ್ರೀಯ ಅಪಾರ್ಟ್ಮೆಂಟ್ಗೆ ಭೇಟಿ ನೀಡಿ ಮಳೆಹಾನಿ ವೀಕ್ಷಣೆ ಮಾಡುವ ವೇಳೆ ನೈಜ ಸಂತ್ರಸ್ತರೇ ಅಹವಾಲು ಹೇಳಿಕೊಳ್ಳಲು ಮುಂದೆ ಬಾರದೇ ಇರುವುದು ನನ್ನನ್ನು ಚಕಿತಗೊಳಿಸಿತು.
ಆ ಅಪಾರ್ಟ್ಮೆಂಟ್ ವೀಕ್ಷಣೆ ಮಾಡಲು ಹೋದರೆ, ಅಲ್ಲಿನ ನಿವಾಸಿಗಳನ್ನು ಸ್ಥಳೀಯ ಶಾಸಕರು, ಮತ್ತವರ ಪಟಾಲಂ ಹೆದರಿಸಿದ್ದಾರೆನ್ನುವ ಮಾಹಿತಿ ಸಿಕ್ಕಿತು. ಯಾರಾದರೂ ನನ್ನನ್ನು ಭೇಟಿಯಾಗಿ ದೂರು ಕೊಟ್ಟರೆ ಇಡೀ ಅಪಾರ್ಟ್ಮೆಂಟ್ ನೆಲಸಮ ಮಾಡಿಸುತ್ತೇವೆ ಎಂದು ಶಾಸಕರ ಗ್ಯಾಂಗ್ ಧಮ್ಕಿ ಹಾಕಿದೆಯಂತೆ. ಯಲಹಂಕದ ಚಿಕ್ಕಬೆಟ್ಟಹಳ್ಳಿಗೆ ಭೇಟಿ ನೀಡಿದಾಗ ಅಭಿವೃದ್ಧಿ ತಾರತಮ್ಯದ ವಿಶ್ವರೂಪ ದರ್ಶನವೇ ಆಯಿತು. ಡಾಂಬರು ಇಲ್ಲದ ರಸ್ತೆಗಳು, ವಿದ್ಯುತ್ ದೀಪಗಳು ಇಲ್ಲದ ಬೀದಿಗಳು, ಕನಿಷ್ಠ ಮೂಲಸೌಕರ್ಯವೂ ಇಲ್ಲದ ಪ್ರದೇಶಗಳು ಕಂಡವು ಎಂದು ಹೆಚ್ಡಿಕೆ ತಿಳಿಸಿದ್ದಾರೆ.