ಕರ್ನಾಟಕ

karnataka

By

Published : Jul 19, 2021, 2:22 PM IST

ETV Bharat / city

ಸಿಎಂ 6 ಬ್ಯಾಗ್‌ ಕೊಂಡೊಯ್ದಿದ್ದರು ಎಂಬ ಹೇಳಿಕೆಗೆ ಬೇರೆ ಅರ್ಥ ಕಲ್ಪಿಸುವುದು ಬೇಡ: ಹೆಚ್​ಡಿಕೆ

ಸಿಎಂ ಯಡಿಯೂರಪ್ಪನವರು ಪ್ರಧಾನಿ ಮೋದಿ ಭೇಟಿಗೆ ದೆಹಲಿಗೆ ಹೋಗುವಾಗ ಆರು ಬ್ಯಾಗ್​ಗಳನ್ನು ಕೊಂಡೊಯ್ದಿದ್ದರು ಎಂದು ನಾನು ಹೇಳಿದ್ದೆ. ಆದರೆ ಈ ಹೇಳಿಕೆಗೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ಹೆಚ್.ಡಿ. ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

H.D. Kumaraswamy
ಹೆಚ್​ಡಿಕೆ

ಬೆಂಗಳೂರು : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಭೇಟಿಗೆ ಹೋದಾಗ ಸಿಎಂ ಯಡಿಯೂರಪ್ಪನವರು ಆರು ಬ್ಯಾಗ್​ಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂಬ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

ಪಕ್ಷದ ಕಚೇರಿ ಜೆಪಿ ಭವನದಲ್ಲಿಂದು ಜಿಲ್ಲಾವಾರು ಸಭೆಗೂ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಆರು ಬ್ಯಾಗ್ ಕೊಂಡೊಯ್ದಿದ್ದಾರೆ ಎಂಬ ಹೇಳಿಕೆಗೆ ಬೇರೆ ಅರ್ಥ ಕಲ್ಪಿಸುವುದು ಬೇಡ. ನಾನೇನು ಆರು ಬ್ಯಾಗ್​ನಲ್ಲಿ ಪ್ರಧಾನಮಂತ್ರಿಯವರಿಗೆ ಹಣ ತೆಗೆದುಕೊಂಡು ಹೋಗಿದ್ದಾರೆ ಎಂದು ಹೇಳಿದ್ನಾ?. ಅವರು ಸಿಎಂ. ಪ್ರಧಾನಿ ಮೋದಿ ಅವರನ್ನು ಮಾತ್ರ ಭೇಟಿ ಮಾಡಲಿಲ್ಲ, ಬೇರೆ ಇಲಾಖೆಯ ಮಂತ್ರಿಗಳನ್ನು ಭೇಟಿ ಮಾಡಿದ್ದಾರೆ‌. ಅದಕ್ಕೋಸ್ಕರ ಆರು ಬ್ಯಾಗ್​ಗಳಲ್ಲಿ ದಾಖಲೆಯನ್ನು ಅಥವಾ ಉಡುಗೊರೆಯನ್ನು ತೆಗೆದುಕೊಂಡು ಹೋಗಿರಬಹುದು ಎಂದಿದ್ದೇನೆ ಅಷ್ಟೇ ಎಂದರು.

ಜಿಲ್ಲಾವಾರು ಸಭೆಗೂ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಹೆಚ್.ಡಿ.ಕುಮಾರಸ್ವಾಮಿ

ಪ್ರಧಾನಿ ಭೇಟಿಗೆ ಹೋದಾಗ ನಾನು ಕೂಡ ಮೈಸೂರು ಪೇಟ, ಶಾಲು, ಗಂಧದ ಹಾರ ಮತ್ತಿತರೆ ವಸ್ತುಗಳನ್ನು ಕೊಡ್ತಾ ಇದ್ದೆ. ರಾಜ್ಯದ ಉಡುಗೊರೆಗಳನ್ನು ಮೊದಲಿನಿಂದಲೂ ಕೊಡುತ್ತಿದ್ದೇವೆ‌. ಆದರೆ ಆರು ಬ್ಯಾಗ್ ಇತ್ತಲ್ಲಾ, ಅದಕ್ಕೆ ಅದರಲ್ಲಿ ಏನಾದ್ರು ಕರ್ನಾಟಕಕ್ಕೆ ಅನುಕೂಲವಾಗುವಂತಹ ದಾಖಲೆ ತೆಗೆದುಕೊಂಡು ಹೋಗಿದ್ದಾರಾ? ಎಂದು ಹೇಳಿದ್ದೇನೆ ಅಷ್ಟೇ ಎಂದು ಸಚಿವ ಈಶ್ವರಪ್ಪ ಹೇಳಿಕೆಗೆ ಪ್ರತ್ಯುತ್ತರ ನೀಡಿದರು.

ಆಡಿಯೋಗಳದ್ದೇ ಸದ್ದು: ಈಗ ಆಡಿಯೋಗಳೇ ಹೆಚ್ಚು ಸೌಂಡ್ ಮಾಡುತ್ತಿವೆ. ಈಗಿನ ವ್ಯವಸ್ಥೆಯಲ್ಲಿ ಏನೇ ಮಾತನಾಡಿದರೂ ರೆಕಾರ್ಡ್ ಆಗುತ್ತದೆ. ನಾವು ಏನು ಮಾತನಾಡಿದ್ರೂ ಎಚ್ಚರಿಕೆಯಿಂದ ಇರಬೇಕು. ಆಡಿಯೋಗಳು ಇತ್ತೀಚಿಗೆ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ. ಆಡಿಯೋ ಬಿಡುಗಡೆಯಾದ ತಕ್ಷಣ ಕೋರ್ಟ್​ಗೆ ಹೋಗೋದು ಸಾಮಾನ್ಯ. ಇತ್ತೀಚೆಗೆ ಸದಾನಂದ ಗೌಡರು ಕೂಡ ಕೋರ್ಟ್​ಗೆ ಹೋಗಿದ್ರು. ಏನೇ ಮಾತನಾಡಿದ್ರು ರೆಕಾರ್ಡ್ ಆಗುತ್ತದೆ. ಅಕ್ಕ-ಪಕ್ಕ ಇರುವ ಯುವಕರು ರೆಕಾರ್ಡ್ ಮಾಡುತ್ತಿರುವುದು ಸಾಮಾನ್ಯವಾಗಿದೆ. ನಾವು ಮಾತನಾಡಬೇಕಾದರೆ ಎಚ್ಚರಿಕೆಯಿಂದ ಇರಬೇಕು. ನಳಿನ್ ಕುಮಾರ್ ಕಟೀಲ್ ಅವರು ಹೇಳಿದ್ದಾರೋ, ಇಲ್ಲವೋ ಎಂಬುದು ತನಿಖೆ ಆಗಬೇಕು ಎಂದರು.

ಇನ್ನು ತನಿಖೆಯಿಂದ ಯಾವ ಅಂತಿಮ ವರದಿ ಕೂಡ ಬರಲ್ಲ. ತಕ್ಷಣಕ್ಕೆ ಅದನ್ನು ಹೇಳ್ತಾರೆ, ಎರಡು ತಿಂಗಳ ನಂತರ ಮರೆತು ಬಿಡ್ತಾರೆ. ಡ್ರಗ್ಸ್ ವಿಚಾರದಲ್ಲಿ ಇಬ್ಬರು ಹೆಣ್ಣುಮಕ್ಕಳು ಜೈಲಿಗೆ ಹೋಗಿ ಬಂದರು. ಆಡಿಯೋ ಕೇಸ್ ತನಿಖೆಯೂ ಅಷ್ಟೇ ಎಂದು ಹೇಳಿದರು.

ಸಿಎಂ ಬದಲಾವಣೆ : ಬಿಜೆಪಿ ಸರ್ಕಾರದಲ್ಲಿ ಕಳೆದ ಎರಡು ವರ್ಷದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಅವರೇ ಹೇಳುತ್ತಿದ್ದಾರೆ. ಸಿಎಂ ಅವರೇ ನಾನು ಎರಡು ವರ್ಷ ಇರುತ್ತೇನೆ ಎಂದು ಹೇಳ್ತಾರೆ. ಈ ಸಮಸ್ಯೆಗಳನ್ನು ನಾಲ್ಕು ಗೋಡೆಗಳ ಮಧ್ಯೆ ಬಗೆಹರಿಸಿಕೊಳ್ಳೋದು ಒಳ್ಳೆಯದು. ಇದು ಬಗೆಹರಿಯದಿದ್ದರೆ ರಾಜ್ಯದ ಸಮಸ್ಯೆಗಳ ಬಗ್ಗೆ ಹಾಗೂ ಜನರ ಸಮಸ್ಯೆಗಳ ಬಗ್ಗೆ ಗಮನ ಹರಿಸಲು ಆಗುವುದಿಲ್ಲ. ಸರ್ಕಾರ, ಆಡಳಿತ ಪಕ್ಷ ಎಚ್ಚರಿಕೆಯಿಂದ ಕೆಲಸ ಮಾಡೋದು ಉತ್ತಮ ಎಂದು ಸಲಹೆ ನೀಡಿದರು.

ABOUT THE AUTHOR

...view details