ಬೆಂಗಳೂರು: ಕೋವಿಡ್ ಸಂಕಷ್ಟದಲ್ಲಿ ಜನರ ತೆರಿಗೆ ಹಣ ಲೂಟಿ ಮಾಡಿದವರು, ಕೆರೆ ಮತ್ತು ರಾಜಕಾಲುವೆಗಳನ್ನು ನುಂಗಿದವರು, ಕಾಮಗಾರಿಗಳಲ್ಲಿ ಕಮಿಷನ್ ಹೊಡೆದವರು ಅದೇ ಜನರಿಗೆ ನಾಲ್ಕೈದು ಕೆಜಿ ಅಕ್ಕಿ ನೀಡಿ ಫೋಸು ಕೊಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕಿಡಿಕಾರಿದರು.
ಬೆಂಗಳೂರಿನ ಹೆಬ್ಬಾಳ ವಿಧಾನಸಭೆ ಕ್ಷೇತ್ರದ ಆರ್.ಟಿ.ನಗರದ ಮೈದಾನದಲ್ಲಿ ನಿನ್ನೆ ಸಂಜೆ ಜೆಡಿಎಸ್ ಪಕ್ಷದ ವತಿಯಿಂದ ಮೋಯಿದ್ದಿನ್ ಅಲ್ತಾಫ್ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ನಾಡಪ್ರಭು ಕೆಂಪೇಗೌಡರ 513ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಡಪ್ರಭುಗಳು ಬಹಳ ದೂರದೃಷ್ಟಿ ಇಟ್ಟುಕೊಂಡು ಬೆಂಗಳೂರು ನಗರವನ್ನು ಕಟ್ಟಿದ್ದರು. ಕೆರೆಕಟ್ಟೆಗಳು ಕಟ್ಟಿ ಇಡೀ ನಗರವನ್ನು ಜಲ ಶ್ಯಾಮಲಗೊಳಿಸಿದ್ದರು. ಆದರೆ, ಇಂದು ಭೂಗಳ್ಳರು ಸಾವಿರಾರು ಕೆರೆಗಳನ್ನು ನುಂಗಿ ನೀರು ಕುಡಿದಿದ್ದಾರೆ. ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ಮೆರೆಯುತ್ತಿದ್ದಾರೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಇವರೆಲ್ಲರನ್ನೂ ಖಾಲಿ ಮಾಡಿಸುತ್ತೇನೆ ಎಂದು ಗುಡುಗಿದರು.
ಕೆರೆ ಮುಚ್ಚಿ ಭೂ ಕಬಳಿಕೆ ಮಾಡಿ ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟಿದ್ದಾರೆ. ರಾಜಕಾಲುವೆಗಳ ಮೇಲೆ ಅರಮನೆಗಳನ್ನು ಮಾಡಿಕೊಂಡಿದ್ದಾರೆ. ಕೆರೆಗಳಿಗೆ ಹರಿದು ಹೋಗಬೇಕಿರುವ ನೀರು ಮನೆಗಳಿಗೆ ಹರಿಯುತ್ತಿದೆ. ಮಳೆ ಬಂದರೆ ತಗ್ಗು ಪ್ರದೇಶಗಳಲ್ಲಿ ವಾಸ ಮಾಡುವ ಜನರು ಜಾಗರಣೆ ಮಾಡಬೇಕಿದೆ. ಇಂಥ ದುಸ್ಥಿತಿ ರಾಜಧಾನಿಯಲ್ಲಿ ನಿರ್ಮಾಣ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.