ಬೆಂಗಳೂರು: ಸರ್ಕಾರ ಆರಂಭದಲ್ಲೇ ಈ ಹಿಜಾಬ್-ಕೇಸರಿ ಶಾಲು ವಿವಾದವನ್ನು ಬಗೆಹರಿಸಬಹುದಿತ್ತು. ಆದ್ರೆ, ಸರ್ಕಾರ ಆ ಕೆಲಸವನ್ನು ಸಮರ್ಪಕವಾಗಿ ಮಾಡಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಪುರಭವನದಲ್ಲಿ ಇಂದು ಆಯೋಜನೆಗೊಂಡಿದ್ದ ಕನ್ನಡ ಮನಸ್ಸುಗಳ ಮುಕ್ತ ಮಾತುಕತೆ ಸಂವಾದಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ವಿವಾದ ಈಗ ನ್ಯಾಯಾಲಯದಲ್ಲಿದೆ. ಆದರೆ, ಕಾಂಗ್ರೆಸ್-ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳು ಈ ವಿಚಾರದಲ್ಲಿ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿವೆ ಎಂದು ಆರೋಪಿಸಿದರು.
ಹಿಜಾಬ್-ಕೇಸರಿ ಶಾಲು ವಿವಾದದ ಕುರಿತಂತೆ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿರುವುದು.. ನಮ್ಮಲ್ಲಿ ಅಲ್ಪಸಂಖ್ಯಾತ, ಬಹುಸಂಖ್ಯಾತ ಎಂಬುದಿಲ್ಲ. ಎಲ್ಲರೂ ಒಂದೇ, ಇಡೀ ದೇಶ ಒಂದೇ. ವಿದ್ಯಾರ್ಥಿಗಳಲ್ಲಿ ಕೋಮು ಭಾವನೆ ಮೂಡಿಸಬಾರದು. ವಾದ-ವಿವಾದ ಮುಂದುವರಿದಿದೆ. ಎಲ್ಲರೂ ಶಾಂತಿ ಕಾಪಾಡಬೇಕು.
ಜನತೆ, ಯುವಕರಿಗೆ ಮತ್ತು ಪೋಷಕರಲ್ಲಿ ವೈಷಮ್ಯಕ್ಕೆ ಅವಕಾಶ ಕೊಡಬಾರದು. ನ್ಯಾಯಾಲಯ ಏನೇ ತೀರ್ಪು ನೀಡಿದರೂ ಅದಕ್ಕೆ ಎಲ್ಲರೂ ಬದ್ಧರಾಗಿರಬೇಕು. ರಕ್ತ ಪಾತಕ್ಕೆ ಅವಕಾಶ ಕೊಡಬಾರದು ಎಂದು ಮನವಿ ಮಾಡಿದರು.
ಯಾವುದೋ ಕೆಲವು ಸಂಘಟನೆಗಳಿಂದ ಪ್ರೇರೇಪಿತರಾಗಿ ಈ ರೀತಿಯ ಘಟನೆಗಳು ಆಗುತ್ತಿದೆ. ಸಮಾಜದಲ್ಲಿ ಅಶಾಂತಿಗೆ ಅವಕಾಶ ಕೊಡಬಾರದು. ಶಾಂತಿಯ ವಾತಾವರಣ ತರಲು ಮನವಿ ಮಾಡುತ್ತೇನೆ ಎಂದರು.
ಇದನ್ನೂ ಓದಿ:ಶಿವಮೊಗ್ಗ: ಸರ್ಕಾರಿ ಕಾಲೇಜಿನಲ್ಲಿ ರಾಷ್ಟ್ರಧ್ವಜ ಹಾರಿಸಿದ ಪ್ರಕರಣ.. ದೂರು ದಾಖಲು
ಶಿಕ್ಷಣ ಸಂಸ್ಥೆಗಳಲ್ಲಿ ರಾಜಕಾರಣ ತರುವ ಕೆಲಸ ಆಗಬಾರದು. ವೋಟ್ ಬ್ಯಾಂಕ್ ರಾಜಕಾರಣಕ್ಕೆ ಇದೆಲ್ಲ ನಡೆಯುತ್ತಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಈ ರೀತಿಯ ವಾತಾವರಣ ಸೃಷ್ಟಿ ಮಾಡಿ ವೋಟ್ ಬ್ಯಾಂಕ್ ರಾಜಕಾರಣ ಮಾಡುವ ಅವಶ್ಯಕತೆ ಇಲ್ಲ. ರಾಜ್ಯದಲ್ಲಿ ಚರ್ಚೆ ಮಾಡುವುದಕ್ಕೆ ಹಲವಾರು ವಿಷಯಗಳಿವೆ. ನಾಡಿನ ಅಭಿವೃದ್ಧಿಗಾಗಿ ಚಿಂತನೆ ಮಾಡಬೇಕು. ಈ ರೀತಿ ಗಲಭೆ ಸೃಷ್ಟಿಸುವ ಅವಶ್ಯಕತೆ ಇಲ್ಲ ಎಂದರು.