ಕರ್ನಾಟಕ

karnataka

ETV Bharat / city

ದೆಹಲಿ ಹಿಂಸಾಚಾರಕ್ಕೆ ಕೇಂದ್ರ ಗುಪ್ತಚರ ಇಲಾಖೆಯ ವೈಫಲ್ಯತೆ ಕಾರಣ: ಹೆಚ್‌.ಡಿ.ದೇವೇಗೌಡ - HD_DeveGowda

ದೆಹಲಿ ಹಿಂಸಾಚಾರ ಪ್ರಕರಣ ಸಂಬಂಧ ಮಾಜಿ ಪ್ರಧಾನಿ ಹೆಚ್​​.ಡಿ.ದೇವೇಗೌಡ ಪ್ರತಿಕ್ರಿಯಿಸಿದ್ದು, ಇದು ಕೇಂದ್ರ ಗುಪ್ತಚರ ಇಲಾಖೆಯ ವೈಫಲ್ಯ ಎಂದಿದ್ದಾರೆ.

HD_DeveGowda_Reactionon delhi violence
ದೆಹಲಿ ಹಿಂಸಾಚಾರ ಪ್ರಕರಣ

By

Published : Feb 29, 2020, 8:06 AM IST

ಬೆಂಗಳೂರು:ದೆಹಲಿ ಹಿಂಸಾಚಾರ ಘಟನೆ ತಲೆತಗ್ಗಿಸುವಂತಹದ್ದು. ಈ ಘಟನೆಯಲ್ಲಿ ಕೇಂದ್ರ ಸರ್ಕಾರದ ಗುಪ್ತಚರ ಇಲಾಖೆಯ ವೈಫಲ್ಯತೆ ಎದ್ದು ಕಾಣುತ್ತಿದೆ ಎಂದು ಜೆಡಿಎಸ್ ವರಿಷ್ಠ ನಾಯಕ ಹೆಚ್.ಡಿ.ದೇವೇಗೌಡ ದೂರಿದ್ದಾರೆ.

ಬೆಂಗಳೂರಿನಲ್ಲಿರುವ ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೇಶಕ್ಕೆ ಆಗಮಿಸಿದ ವೇಳೆ ಹಿಂಸಾತ್ಮಕ ಘಟನೆಗಳು ನಡೆದಿವೆ. ಕೇಂದ್ರ ಸರ್ಕಾರ ಟ್ರಂಪ್ ಕಡೆ ಹೆಚ್ಚು ಗಮನ ಕೇಂದ್ರೀಕರಿಸಿದ್ದು ಪ್ರತಿಭಟನೆಯನ್ನು ಕಡೆಗಣಿಸಿದೆ. ಹೀಗಾಗಿ ಘಟನೆ ತಡೆಯುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದರು. ಜೊತೆಗೆ ಘಟನೆಗೆ ಕೇಂದ್ರ ಗೃಹ ಇಲಾಖೆ ಪೂರ್ಣ ಹೊಣೆ ಹೊರಬೇಕು ಎಂದರು.

ಅಮೂಲ್ಯ ಲಿಯೋನ್​​ ಬಗ್ಗೆ ಪ್ರತಿಕ್ರಿಯೆ:

ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ನಡೆದ ಕಾರ್ಯಕ್ರಮಕ್ಕೆ ಪಾಕಿಸ್ತಾನ ಪರ ಘೋಷಣೆ ಕೂಗಿದ ಅಮೂಲ್ಯ ಬರುವುದು ಗೊತ್ತಿರಲಿಲ್ಲ. ಓವೈಸಿ ಬರುತ್ತಾರೆ ಎಂಬುದಾಗಿ ಮಾತ್ರ ಹೇಳಿದ್ದರು. ನನ್ನ ಮನೆಗೆ ಹಿರಿಯ ಮುಸ್ಲಿಂ ನಾಯಕರು ಬಂದಿದ್ದು, ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಆದರೆ ಆರೋಗ್ಯ ಸರಿ ಇಲ್ಲ ಎಂದು ಹೇಳಿದ್ದೆ. ಆರೋಗ್ಯ ಸರಿ ಇಲ್ಲದ ಕಾರಣ ಕಾರ್ಯಕ್ರಮಕ್ಕೆ ಹೋಗಿರಲಿಲ್ಲ. ಸಮಾರಂಭಕ್ಕೆ ಹೋಗುತ್ತೇನೆ ಎಂದು ಫ್ಲೆಕ್ಸ್‌ನಲ್ಲಿ ಫೋಟೋ ಹಾಕಿದ್ದರು. ಅಮೂಲ್ಯ ಮೂರ್ನಾಲ್ಕು ಸಭೆಯಲ್ಲಿ ಭಾಷಣ ಮಾಡಿದ್ದಳು, ಹಾಸನದಲ್ಲಿಯೂ ನಡೆದ ಒಂದು ಕಾರ್ಯಕ್ರಮದಲ್ಲಿ ಆಕೆ ಭಾಷಣ ಮಾಡಿದ್ದಳು. ಅಲ್ಲಿ ಆ ರೀತಿ ಏನೂ ಆಕೆ ಮಾತನಾಡಿಲ್ಲ. ಪಾಕ್ ಪರ ಘೋಷಣೆ ಕೂಗಿರುವವರ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿದೆ ಎಂದರು.

ಸಿಎಂ ಯಡಿಯೂರಪ್ಪ ಹುಟ್ಟುಹಬ್ಬಕ್ಕೆ ಶುಭಾಶಯ:

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಿದ್ದ ಅಭಿನಂದನಾ ಸಮಾರಂಭಕ್ಕೆ ನನಗೂ ಆಹ್ವಾನವಿತ್ತು. ಕಾರ್ಯಕ್ರಮಕ್ಕೆ ಹೋಗುವ ಆಸೆ ಇತ್ತು. ಆದರೆ, ಆರೋಗ್ಯ ಸಮಸ್ಯೆಯಿಂದ ಹೋಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಯಡಿಯೂರಪ್ಪ ಅವರಿಗೆ ಪತ್ರ ಬರೆದು ಶುಭಾಶಯ ತಿಳಿಸಿದ್ದೇನೆ ಎಂದ್ರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತಿಗೆ ಯಡಿಯೂರಪ್ಪ ಭಾವೋದ್ವೇಗಕ್ಕೆ ಒಳಗಾದ ವಿಚಾರಕ್ಕೆ ಪ್ರತಿಕ್ರಿಯಿಸಿದ ಗೌಡರು, ಗಟ್ಟಿಗಾರ ಯಡಿಯೂರಪ್ಪ ಮೊದಲ ಬಾರಿಗೆ ಸಿದ್ದರಾಮಯ್ಯ ಮಾತು ಕೇಳಿ ಭಾವೋದ್ವೇಗದಿಂದ ಪ್ರತಿಕ್ರಿಯೆ ನೀಡುವುದನ್ನು ನಾನು ಟಿವಿಯಲ್ಲಿ ನೋಡಿದ್ದೇನೆ ಎಂದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರೆ ಪಕ್ಷ ಬಿಟ್ಟು ಹೋದವರು ವಾಪಸ್ಸು ಬರುತ್ತಾರೆ ಎಂದು ಹಿರಿಯ ನಾಯಕಿ ಮಾರ್ಗರೇಟ್ ಆಳ್ವಾ ಹೇಳಿಕೆಯನ್ನು ಅಲ್ಲಗೆಳೆಯುವುದಿಲ್ಲ. ಅವರು ಕಾಂಗ್ರೆಸ್‌ನಲ್ಲಿ ಹಿರಿಯ ನಾಯಕರು ಎಂದ್ರು.

ಕೆ.ಆರ್. ಪೇಟೆ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದೇನೆ:

ಕೆ.ಆರ್. ಪೇಟೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಆ ಭಾಗದ ಸಚಿವರು ತೊಂದರೆ ಕೊಡುತ್ತಿದ್ದಾರೆ. ಹೀಗಾಗಿ ಅಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಭಾಗವಹಿಸಲು ನಾನು ತೆರಳುತ್ತಿದ್ದೇನೆ. ಕಾರ್ಯಕರ್ತರಿಗೆ ತೊಂದರೆಯಾದರೆ ಸಹಿಸುವುದಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೂ ತಂದಿದ್ದೇನೆ. ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆಯೋ ನೋಡುತ್ತೇನೆ ಎಂದು ಹೇಳಿದರು.

ಮಹದಾಯಿ ಅಧಿಸೂಚನೆ ಸಂತಸದ ವಿಷಯ:

ಮಹದಾಯಿ ನದಿ ನೀರು ವಿವಾದ ಕುರಿತು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿರುವುದು ಸಂತಸದ ವಿಚಾರ. ಅಧಿಸೂಚನೆಯಿಂದ 13 ಟಿಎಂಸಿ ನೀರು ರಾಜ್ಯಕ್ಕೆ ಲಭಿಸಲಿದೆ. ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಅಧಿಸೂಚನೆ ಹೊರಡಿಸಲಾಗಿದ್ದು, ವಿಳಂಬ ಮಾಡದೆ ಅಧಿಸೂಚನೆ ಹೊರಡಿಸಿರುವುದು ಸಂತೋಷ ಎಂದರು. ಕಾವೇರಿ ನದಿ ನೀರು ವಿವಾದ ಸಂಬಂಧ ಅಧಿಸೂಚನೆ ಹೊರಡಿಸುವುದು ಸಾಕಷ್ಟು ವಿಳಂಬವಾಗಿತ್ತು. ಆದರೆ, ಮಹದಾಯಿ ವಿಚಾರದಲ್ಲಿ ಅಧಿಸೂಚನೆ ಶೀಘ್ರ ಹೊರಡಿಸಿದ್ದಾರೆ. ಆ ಭಾಗದ ಜನರು ದೊಡ್ಡ ಹೋರಾಟ ನಡೆಸಿದ್ದಾರೆ. ಅವರೆಲ್ಲರ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ಹೇಳಿದರು.

ಬಿಬಿಎಂಪಿ ಚುನಾವಣೆ ಯಲ್ಲಿ ಏಕಾಂಗಿ ಸ್ಪರ್ಧೆ:

ಬಿಬಿಎಂಪಿ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ತಮ್ಮ ಪಕ್ಷ ಏಕಾಂಗಿಯಾಗಿ ಸ್ಪರ್ಧೆ ಮಾಡಲಿದೆ. ಈಗಾಗಲೇ 55 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ಎರಡು-ಮೂರು ತಿಂಗಳಲ್ಲಿ ಚುನಾವಣೆ ಬರಲಿದೆ ಎಂದರು.

ABOUT THE AUTHOR

...view details