ಬೆಂಗಳೂರು: ರಾಜ್ಯದಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅನುದಾನ ಕೇವಲ ಶೇ. 32 ರಷ್ಟು ಮಾತ್ರ ಬಳಕೆಯಾಗಿದೆ. ಏಪ್ರಿಲ್ ಅಂತ್ಯದೊಳಗೆ ಪ್ರಗತಿಯಲ್ಲಿರುವ ಎಲ್ಲ ಕಾಮಗಾರಿಗಳನ್ನು ಮುಗಿಸಿ ವರದಿ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಾ. ನಾರಾಯಣಗೌಡ ಸೂಚನೆ ನೀಡಿದರು.
ನಿನ್ನೆ ವಿಕಾಸಸೌಧದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ ಬಳಕೆಯಲ್ಲಿ ಹಾಸನ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಹಾಸನ ಶೇ. 68 ರಷ್ಟು ಅನುದಾನ ಬಳಕೆ ಮಾಡಿಕೊಂಡಿದೆ. ಉಡುಪಿ ಎರಡನೇ ಸ್ಥಾನದಲ್ಲಿದ್ದು 63 ರಷ್ಟು ಅನುದಾನ ವೆಚ್ಚ ಮಾಡಿದ್ದಾರೆ. 61 ರಷ್ಟು ಅನುದಾನ ಉಪಯೋಗಿಸಿರುವ ಚಿಕ್ಕಮಗಳೂರು 3 ನೇ ಸ್ಥಾನದಲ್ಲಿದೆ. ಅತ್ಯುತ್ತಮ ಕೆಲಸ ಮಾಡಿರುವ ಜಿಲ್ಲಾಧಿಕಾರಿಗಳನ್ನು ಅಭಿನಂದಿಸಿದ ಸಚಿವ ನಾರಾಯಣಗೌಡ, ಉತ್ತಮವಾಗಿ ಕೆಲಸ ಮಾಡುವ ಜಿಲ್ಲಾಧಿಕಾರಿಗಳನ್ನು ವಿಧಾನಸೌಧಕ್ಕೆ ಕರೆತಂದು ಗೌರವಿಸುತ್ತೇನೆ ಎಂದರು.
ಸಚಿವ ಡಾ. ನಾರಾಯಣಗೌಡ ಅವರು ತಿಂಗಳ ಹಿಂದೆ ಪ್ರಗತಿ ಪರಿಶೀಲನಾ ಸಭೆ ನಡೆಸಿದಾಗ 1,150 ಕೋಟಿ ರೂ. ಅನುದಾನ ಪಿಡಿ ಖಾತೆಯಲ್ಲಿರುವುದು ಗಮನಕ್ಕೆ ಬಂದಿತ್ತು. ಅನುದಾನ ಬಳಕೆಯಾಗದೆ ಇರುವುದಕ್ಕೆ ಗರಂ ಆಗಿದ್ದ ಸಚಿವರು, ತಿಂಗಳ ಗಡವು ನೀಡಿದ್ದರು. ಇಂದು ಮತ್ತೆ ಸಭೆ ನಡೆಸಿದಾಗ ಒಂದೇ ತಿಂಗಳಲ್ಲಿ ಜಿಲ್ಲಾಧಿಕಾರಿಗಳು 150 ಕೋಟಿ ರೂ. ಅನುದಾನ ವೆಚ್ಚ ಮಾಡಿರುದು ಗಮನಕ್ಕೆ ಬಂದಿದೆ. ಅಧಿಕಾರಿಗಳು ಚುರುಕಿನಿಂದ ಕೆಲಸ ಮಾಡಿದ್ದಕ್ಕೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕರ ಅನುದಾನ ಹೊರತುಪಡಿಸಿ, ಇಲಾಖೆಯಿಂದ ನೀಡಿರುವ ಅನುದಾನ ಪಿಡಿ ಖಾತೆಯಲ್ಲಿದ್ದು, ಅನುದಾನ ಬಳಕೆಗಾಗಿ 2017 ರಲ್ಲೇ ಅನುಮೋದನೆ ನೀಡಲಾಗಿತ್ತು. ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಕಾಮಗಾರಿ ನಡೆಸಲು ಅನುಮೋದನೆ ನೀಡಲಾಗಿತ್ತು. ಆದರೆ ಇನ್ನೂ ಸಮರ್ಪಕ ರೀತಿಯಲ್ಲಿ ಬಳಕೆಯಾಗದಿರುವುದಕ್ಕೆ ಸಚಿವರು ಜಿಲ್ಲಾಧಿಕಾರಿಗಳ ಮೇಲೆ ಗರಂ ಆದರು. ತಕ್ಷಣ ಕಾಮಗಾರಿ ಮುಗಿಸಿ, ವರದಿ ನೀಡಿ ಎಂದು ಸಚಿವರು ಜಿಲ್ಲಾಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.