ಬೆಂಗಳೂರು: ಮಾರ್ಚ್ನಲ್ಲಿ ಆರಂಭವಾದ ಕೊರೊನಾ ಆತಂಕ ಇನ್ನೂ ಕಡಿಮೆಯಾಗಿಲ್ಲ. ಜನ ಜಂಗುಳಿಯಿಂದ ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿ ನಿರತವಾಗಿದ್ದ ರಾಜ್ಯ ಕೊರೊನಾ ಭಯಕ್ಕೆ ಏಕಾಏಕಿ ಸ್ತಬ್ಧವಾಗಿತ್ತು. ಇದೀಗ ಕೊರೊನಾ ಆತಂಕ ಮುಂದುವರೆದಿರುವ ನಡುವೆಯೇ ರಾಜ್ಯಾದ್ಯಂತ ಜನಜೀವನ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ.
ಶಾಲಾ - ಕಾಲೇಜುಗಳು, ಪಾರ್ಕ್‌ಗಳು, ಸಿನಿಮಾ ಮಂದಿರ, ಮನರಂಜನಾ ಕೇಂದ್ರ, ಸಂಪೂರ್ಣ ರೈಲು ಹಾಗೂ ವಿಮಾನ ಸಂಚಾರ ಹೊರತುಪಡಿಸಿ ರಾಜ್ಯಾದ್ಯಂತ ಜನ ಜೀವನ ಶೇ.90ರಷ್ಟು ಅನ್ಲಾಕ್ ಆಗಿದೆ. ಆದರೆ, ಅಕ್ಟೋಬರ್ 15ರಿಂದ ಉಳಿದವುಗಳ ಲಾಕ್ ಕೂಡ ಓಪನ್ ಆಗಲಿದೆ. ಕೋವಿಡ್ಗೂ ಮುನ್ನ ವ್ಯಾಪಾರ ವಹಿವಾಟಿಗೆ ಹೋಲಿಸಿದರೆ ಶೇ.50ರಷ್ಟೂ ಕೂಡ ಚೇತರಿಕೆ ಕಂಡಿಲ್ಲ. ಸಾರಿಗೆ ಸೇವೆ ಆರಂಭವಾಗಿದ್ದರೂ ಜನರು ಬಳಸಲು ಹಿಂದೇಟು ಹಾಕುತ್ತಿದ್ದಾರೆ.
ದೇಶಾದ್ಯಂತ ಕೋವಿಡ್ ಆತಂಕ ಕಾಣಿಸಿಕೊಂಡಾಗ ಮಾರ್ಚ್ 25ರಿಂದ ಲಾಕ್ಡೌನ್ ಜಾರಿಗೊಳಿಸಲಾಗಿತ್ತು. ಆ ನಂತರ ಹಂತ ಹಂತವಾಗಿ ಲಾಕ್ಡೌನ್ ಅನ್ನು ತೆರವುಗೊಳಿಸಲಾಗಿದ್ದು, ಸೆಪ್ಟೆಂಬರ್‌ನಿಂದ ಸಾರ್ವಜನಿಕ ಕಾರ್ಯಕ್ರಮಗಳು, ಮೆಟ್ರೋ ರೈಲು, ಬಾರ್ ಮತ್ತು ರೆಸ್ಟೋರೆಂಟ್, ಕ್ಲಬ್ ಸೇರಿ ಅನೇಕ ನಿರ್ಬಂಧಿತ ಕ್ಷೇತ್ರಗಳಿಗೂ ಷರತ್ತು ವಿಧಿಸಿ ಅನುವು ಮಾಡಿಕೊಡಲಾಗಿದೆ. ಇನ್ನು ಪ್ರವಾಸೋದ್ಯಮ ನಂಬಿ ಜೀವನ ನಡೆಸುತ್ತಿದ್ದ ಹೋಟೆಲ್ಗಳು, ಕಾರು ಮಾಲೀಕರು ಮತ್ತು ಚಾಲಕರು ಆಟೋ ವಾಲಾಗಳು, ಗೈಡರ್ಗಳ ಕುಟುಂಬ, ಕರಕುಶಲ ಕರ್ಮಿಗಳು ಹೀಗೆ ಹತ್ತಾರು ವಿವಿಧ ಕ್ಷೇತ್ರಗಳ ಮೂಲಕ ಜೀವನ ಸಾಗಿಸುತ್ತಿದ್ದವರ ಬದುಕು ಅಯೋಮಯವಾಗಿದೆ.
ಸಹಜ ಸ್ಥಿತಿಗೆ ಮರಳುತ್ತಿರುವ ರಾಜ್ಯ ಇನ್ನೂ ಕಾರ್ಮಿಕರು ಹೊರರಾಜ್ಯದಿಂದ ವಿರಳ ಸಂಖ್ಯೆಯಲ್ಲಿ ಕೆಲಸ ಅರಸಿ ತುಮಕೂರು ಜಿಲ್ಲೆಗೆ ಹೆಜ್ಜೆ ಹಾಕುತ್ತಿದ್ದಾರೆ. ಜಿಲ್ಲೆಯ ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣದಲ್ಲಿ ನಿತ್ಯ 500 ಬಸ್ಗಳು ಓಡಾಡ್ತಿದ್ದರೂ ಪ್ರಯಾಣಿಕರ ಓಡಾಟ ಗಣನೀಯ ಪ್ರಮಾಣದಲ್ಲಿ ಕ್ಷೀಣಿಸಿದೆ. ಅಲ್ಲದೇ, ಗ್ರಾಮೀಣ ಪ್ರದೇಶಗಳಿಗೆ ಬಸ್ಗಳ ಸಂಚಾರ ಇನ್ನು ಆರಂಭವಾಗದ ಹಿನ್ನೆಲೆ ಜನ ಸಂಚಾರ ಇಲ್ಲದಂತಾಗಿದೆ.
ಮಂಗಳೂರಿನಲ್ಲಿ ಕಾರ್ಮಿಕರಿಲ್ಲದೇ ನಿರ್ಮಾಣ ಕಾಮಗಾರಿಗಳಿಗೆ ಸಮಸ್ಯೆಯುಂಟಾಗಿತ್ತು. ಈ ಕಾರಣದಿಂದ ಕೆಲವು ಬಿಲ್ಡರ್ಸ್ಗಳೇ ಬಸ್ ವ್ಯವಸ್ಥೆ ಮಾಡಿ ಕಾರ್ಮಿಕರನ್ನು ಕರೆಸಿಕೊಂಡಿದ್ದರು. ಕೊರೊನಾ ಭಯದಿಂದ ಸ್ಥಬ್ಧವಾಗಿದ್ದ ನಗರಗಳಲ್ಲಿ ಚಟುವಟಿಕೆಗಳು ಆರಂಭವಾಗಿದ್ದರೂ ಪೂರ್ಣ ಪ್ರಮಾಣದಲ್ಲಿ ಸಹಜಸ್ಥಿತಿಗೆ ಬಂದಿಲ್ಲ. ಆದರೆ, ಸಹಜ ಸ್ಥಿತಿಗೆ ಮರಳಲು ಸಾಕಷ್ಟು ಸಮಯ ಬೇಕಾಗಬಹುದು ಎನ್ನಲಾಗಿದೆ.