ಬೆಂಗಳೂರು: ಕಾವೇರಿ ವನ್ಯಜೀವಿ ಅಭಯಾರಣ್ಯದ ಹಲಗೂರು ವಿಭಾಗದಲ್ಲಿ ತಾಯಿಯಿಂದ ಬೇರ್ಪಟ್ಟ 3.5 ತಿಂಗಳ ಗಂಡು ಮರಿ ಆನೆಯೊಂದನ್ನು ಆರೈಕೆಗಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹಸ್ತಾಂತರಿಸಲಾಗಿದೆ ಎಂದು ಕಾರ್ಯ ನಿರ್ವಾಹಣಾ ನಿರ್ದೇಶಕ ಸುನಿಲ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜುಲೈ 30ರಂದು ಮುತ್ತತ್ತಿ ಕಡೆಗೆ ಹೋಗುವ ದಾರಿಯಲ್ಲಿ ಆನೆ ಮರಿಯೊಂದು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಕಣ್ಣಿಗೆ ಬಿದ್ದಿತ್ತು. ಬಳಿಕ ಅರಣ್ಯ ಇಲಾಖೆ ವ್ಯಾಪ್ತಿಯ ಆನೆಗಳ ಹಿಂಡುಗಳೊಂದಿಗೆ ಈ ಮರಿ ಆನೆ ಸೇರಿಸಲು ಸಿಬ್ಬಂದಿ ಪ್ರಯತ್ನಿಸಿದರೂ, ಗಜ ಪಡೆ ತಿರಸ್ಕರಿಸಿತ್ತು. ಹೀಗಾಗಿ, ಪ್ರಸ್ತುತ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಆನೆ ಮಾವುತರು ಮರಿಯನ್ನು ಆರೈಕೆ ಮಾಡುತ್ತಿದ್ದಾರೆ. ಕನಿಷ್ಠ 6 ತಿಂಗಳಿಂದ 1 ವರ್ಷದವರೆಗೆ ತಾಯಿಯ ಹಾಲಿಲ್ಲದ ಮರಿಗಳು ಕಡಿಮೆ ರೋಗ ನಿರೋಧಕ ಶಕ್ತಿ ಹೊಂದಿದ್ದು, ಬದುಕುಳಿಯುವುದು ಕಷ್ಟಸಾಧ್ಯ. ಆದ್ದರಿಂದ ಹೆಚ್ಚಿನ ಮುನ್ನೆಚ್ಚರಿಕೆ ಕ್ರಮ ವಹಿಸಲಾಗುತ್ತಿದೆ ಎಂದಿದ್ದಾರೆ.