ಬೆಂಗಳೂರು: ಎರಡು ವಿಧಾನಸಭೆ ಉಪಚುನಾವಣೆ ಕಣದಲ್ಲಿ ಪ್ರಚಾರದ ಭರಾಟೆ ಜೋರಾಗಿಯೇ ಸಾಗಿದ್ದು, ಎರಡು ರಾಷ್ಟ್ರೀಯ ಪಕ್ಷಗಳ ಜತೆ ಒಂದು ಪ್ರಾದೇಶಿಕ ಪಕ್ಷ ಸಹ ಪೈಪೋಟಿಗೆ ಬಿದ್ದಂತೆ ಪ್ರಚಾರ ನಡೆಸುತ್ತಿದೆ.
ಇತಿಹಾಸದ ಪುಟ ತಿರುವಿದಾಗ ಎರಡೂ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಮೇಲುಗೈ ಹೊಂದಿದೆ. ಆದರೆ, ಈ ಚುನಾವಣೆ ಹಿಂದೆಲ್ಲಾ ಚುನಾವಣೆಗಳಿಗಿಂತ ಭಿನ್ನವಾಗಿರಲಿದೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಬಿಜೆಪಿ ಆಡಳಿತ ಪಕ್ಷವಾಗಿದ್ದು ಗೆಲುವಿಗಾಗಿ ಹರಸಾಹಸ ನಡೆಸಲಿದೆ. ಇನ್ನು ಎರಡೂ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ತನ್ನ ಸದಸ್ಯರನ್ನು ಹೊಂದಿರಲಿಲ್ಲ. ಇದರಿಂದ ಸ್ಥಾನ ಲಭಿಸಿದರೆ ಸಂತೋಷ, ಇಲ್ಲವಾದರೂ ಕಳೆದುಕೊಳ್ಳುವುದು ಏನೂ ಇಲ್ಲ.
ಸದ್ಯ ಸಿಂದಗಿಯಲ್ಲಿ ಜೆಡಿಎಸ್ ಸದಸ್ಯರಾಗಿದ್ದ ಮಾಜಿ ಸಚಿವ ಎಂ.ಸಿ. ಮನಗೂಳಿ ಹಾಗೂ ಹಾನಗಲ್ನಲ್ಲಿ ಮಾಜಿ ಸಚಿವ ಹಾಗೂ ಬಿಜೆಪಿ ಸದಸ್ಯರಾಗಿದ್ದ ಸಿ.ಎಂ. ಉದಾಸಿ ನಿಧನದಿಂದ ತೆರವಾಗಿರುವ ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿದೆ.
ಸಿಂದಗಿ ಚಿತ್ರಣ:1957ರಿಂದ ಇದುವರೆಗೂ ನಡೆದ ಚುನಾವಣೆಗಳ ಪೈಕಿ ಸಿಂದಗಿ ಕ್ಷೇತ್ರವನ್ನು ಗಮನಿಸಿದರೆ ಇಲ್ಲಿ ಅತಿ ಹೆಚ್ಚು ಅಂದರೆ 8 ಬಾರಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ ಸಹ 3 ಸಾರಿ ಗೆಲುವು ಸಾಧಿಸಿದೆ. ಇದುವರೆಗೂ ಕ್ಷೇತ್ರದಲ್ಲಿ 14 ಬಾರಿ ವಿಧಾನಸಭೆ ಚುನಾವಣೆ ನಡೆದಿದೆ. ಇದರಲ್ಲಿ ಕಾಂಗ್ರೆಸ್ ಪಕ್ಷ 8 ಬಾರಿ ಅಂದರೆ 1957, 1962, 1967, 1972, 1978, 1985, 1989 ಮತ್ತು 1999ರಲ್ಲಿ ಗೆಲುವು ದಾಖಲಿಸಿದೆ.
ಇನ್ನು ಬಿಜೆಪಿ 2004, 2008, 2013ರಲ್ಲಿ ಗೆದ್ದರೆ, ಜೆಡಿಎಸ್ ಇದೇ ಮೊದಲ ಬಾರಿಗೆ ಖಾತೆಯನ್ನು 2018ರಲ್ಲಿ ತೆರೆದಿತ್ತು. 1983ರಲ್ಲಿ ಜೆಎನ್ಪಿ, 1994ರಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದರು. ಎಂ.ರಾಮಪ್ಪ ಎಂಬುವರು ಮೂರು ಬಾರಿ ಗೆಲುವು ಸಾಧಿಸಿದ್ದೇ ಅಧಿಕ. 2008 ಮತ್ತು 2013ರಲ್ಲಿ ಬಿಜೆಪಿಯಿಂದ ಗೆದ್ದಿದ್ದ ರಮೇಶ್ ಭೂಸನೂರು 2018ರಲ್ಲಿ ಹ್ಯಾಟ್ರಿಕ್ ಸಾಧಿಸುವ ಅವಕಾಶ ಕಳೆದುಕೊಂಡಿದ್ದರು. ಇದೀಗ ಪಕ್ಷ ಅವರಿಗೆ ಇನ್ನೊಂದು ಅವಕಾಶ ನೀಡಿದೆ.