ಬೆಂಗಳೂರು :ಕುಟುಂಬ ರಾಜಕಾರಣ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದ್ದು, ಕುಟುಂಬ ಭ್ರಷ್ಟಾಚಾರ, ಕುಟುಂಬ ರಾಜಕಾರಣ ನಿಲ್ಲಬೇಕು ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಆಗ್ರಹಿಸಿದ್ದು, ಬಿಜೆಪಿ ಮುಂದಿನ ಚುನಾವಣೆಗೆ ಸಿದ್ಧವಾಗಬೇಕಿದೆ ಎಂದು ಸಲಹೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ವಿಶ್ವನಾಥ್, 75 ವರ್ಷ ಮೀರಿದವರಿಗೆ ಆಡಳಿತ ನಡೆಸಲು ಆಗುವುದಿಲ್ಲ. ವಯಸ್ಸು, ಆರೋಗ್ಯದಿಂದ ಯಡಿಯೂರಪ್ಪ ಬಳಲಿದ್ದಾರೆ. ಮೊದಲಿದ್ದ ಶಕ್ತಿ ಈಗ ಯಡಿಯೂರಪ್ಪ ಅವರಲ್ಲಿ ಇಲ್ಲ. ಚುನಾವಣೆಗೆ ಬಿಜೆಪಿ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ 'ದುರುದ್ದೇಶವಿಲ್ಲ'
ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿದ ವಿಶ್ವನಾಥ್, ಬಿಎಸ್ವೈ ಅವರಿಗೆ ವಯಸ್ಸು ಸಹಕರಿಸುತ್ತಿಲ್ಲ. ಹೀಗಾಗಿ ನಾಯಕತ್ವ ಬದಲಾವಣೆ ಆಗಬೇಕೆಂದು ಒತ್ತಾಯಿಸಿದ್ದೇನೆ. ಇದರಲ್ಲಿ ಯಾವುದೇ ದುರುದ್ದೇಶವಿಲ್ಲ. ಎಲ್ಲಾ ಇಲಾಖೆಯಲ್ಲಿ ವಿಜಯೇಂದ್ರ ಹಸ್ತಕ್ಷೇಪವಿದೆ. ಯಾವ ಮಂತ್ರಿ ಕೂಡಾ ಸಮಾಧಾನವಾಗಿಲ್ಲ ಎಂದಿದ್ದಾರೆ.
ಇದನ್ನೂ ಓದಿ:Viral Video: ಲಸಿಕೆ ಹಾಕುವ ಸಿಬ್ಬಂದಿ ಮೇಲೆ ಕಲ್ಲು ತೂರಿದ ಕುಟುಂಬಸ್ಥರು
ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಭ್ರಷ್ಟಾಚಾರ ವಿಚಾರವಾಗಿ ಮಾತನಾಡಿದ ಅವರು, ಇದು 20 ಸಾವಿರ ಕೋಟಿ ರೂಪಾಯಿಯ ಯೋಜನೆಯಾಗಿದ್ದು, ವಿಜಯೇಂದ್ರ ಕಿಕ್ ಬ್ಯಾಕ್ ಪಡೆದಿದ್ದಾರೆ. ಜಾರಿ ನಿರ್ದೇಶನಾಲಯದಲ್ಲಿಯೂ ಅವರ ವಿರುದ್ಧ ದೂರು ದಾಖಲಾಗಿದ್ದು, ಇದೇ ವಿಚಾರಕ್ಕೆ ಪದೇ ಪದೇ ದೆಹಲಿಗೆ ತೆರಳುತ್ತಾರೆ ಎಂದು ಮಾಹಿತಿ ಬಹಿರಂಗಪಡಿಸಿದ್ದಾರೆ.
'ಮತ್ತೊಮ್ಮೆ ಜೈಲಿಗೆ ಹೋಗಬಾರದು'
ಈ ಹಿಂದೆ ಕುಟುಂಬದಿಂದಾಗಿ ಯಡಿಯೂರಪ್ಪ ಜೈಲಿಗೆ ಹೋಗಿದ್ದರು. ಈಗ ಮತ್ತೊಮ್ಮೆ ಜೈಲಿಗೆ ಹೋಗಬಾರದು. ಈ ಕಳಕಳಿಯ ಮೇಲೆ ಹೈಕಮಾಂಡ್ ಗಮನಕ್ಕೆ ತರಲಾಗಿದೆ ಎಂದು ವಿಶ್ವನಾಥ್ ಸ್ಪಷ್ಟನೆ ನೀಡಿದ್ದಾರೆ.
'ಈಶ್ವರಪ್ಪಗೆ ಕಾಮನ್ಸೆನ್ಸ್ ಇಲ್ಲ'
17 ಜನರಿಂದ ಬಿಜೆಪಿ ಹಾಳಾಯ್ತುಎಂಬ ಸಚಿವ ಈಶ್ವರಪ್ಪ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈಶ್ವರಪ್ಪಗೆ ರಾಜಕೀಯ ಕಾಮನ್ಸೆನ್ಸ್ ಇಲ್ಲ. ಈಶ್ವರಪ್ಪ ಕೂಡ ಕುಟುಂಬ ರಾಜಕಾರಣಿ. ರಾಜ್ಯಪಾಲರಿಗೆ ಸಿಎಂ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಈಶ್ವರಪ್ಪ ದೂರು ಕೊಟ್ಟಿದ್ದರು. ಈಗ ವಲಸಿಗರ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ವಿಶ್ವನಾಥ್ ಕಿಡಿಕಾರಿದರು.
ಸಿದ್ದರಾಮಯ್ಯ, ಕುಮಾರಸ್ವಾಮಿಗೂ ಕಿಕ್ ಬ್ಯಾಕ್
ಜಿಂದಾಲ್ಗೆ ಭೂಮಿ ಪರಭಾರೆ ಬಗ್ಗೆ ಮೊದಲು ದನಿ ಎತ್ತಿದ್ದೇ ನಾನು. ಸಿದ್ದರಾಮಯ್ಯ, ಕುಮಾರಸ್ವಾಮಿ ಏನು ಬಾಯಿಬಿಟ್ಟಿದ್ದಾರಾ? ಕಿಕ್ ಬ್ಯಾಕ್ ಪಡೆದು ಎಲ್ಲರೂ ಸುಮ್ಮನಾಗಿದ್ದಾರೆ. ಇಲ್ಲಿ ಮೂರು ಪಕ್ಷಗಳು ಅಧಿಕಾರ ನಡೆಸುತ್ತಿವೆ ಎಂಬುದು ಸತ್ಯ. ಈ ಸಂಬಂಧ ಸಿ.ಪಿ ಯೋಗೀಶ್ವರ್ ಹೇಳಿದ್ದು ಸತ್ಯವಾಗಿದೆ ಎಂದರು.
ಶೇ.80ರಷ್ಟು ಶಾಸಕರಿದ್ದಾರೆ
ರಾಜ್ಯ ಉಸ್ತುವಾರಿ ಜೊತೆಗಿನ ಒನ್ ಟು ಒನ್ ಸಭೆಯಲ್ಲಿ ಶೇಕಡ 80ರಷ್ಟು ಶಾಸಕರು ನಾಯಕತ್ವ ಬದಲಾವಣೆ ಕೇಳಿದ್ದಾರೆ. ಅರುಣ್ ಸಿಂಗ್ ಬಳಿ ಒಳಗೆ ಮಾತನಾಡಿರುವುದು ಬೇರೆ, ಹೊರಬಂದ ಬಳಿಕ ಹೇಳಿಕೆ ನೀಡುವುದು ಬೇರೆಯಾಗಿರುತ್ತದೆ. ಬಹುತೇಕರು ನಾಯಕತ್ವ ಬದಲಾವಣೆ ಬೇಕೆಂದು ಹೇಳಿದ್ದಾರೆ. ಎಲ್ಲರಿಗೂ ಎಲ್ಲವನ್ನೂ ಮಾತನಾಡುವ ಧೈರ್ಯ ಇಲ್ಲ ಎಂದರು.
ಹಳೆಯದನ್ನು ಕೆದಕಿದ ವಿಶ್ವನಾಥ್
ಮೊದಲ ಬಾರಿ ಯಡಿಯೂರಪ್ಪ ಮುಖ್ಯಮಂತ್ರಿ ಆದಾಗ ರೇಣುಕಾಚಾರ್ಯ ಹೈದರಾಬಾದ್ಗೆ ಹೋಗಿದ್ದನ್ನು ಮರೆತಿದ್ದಾರೆ. ನರ್ಸ್ ಜಯಲಕ್ಷ್ಮಿ ಪ್ರಕರಣವನ್ನು ಮರೆತಿದ್ದಾರೆ. ಸ್ನೇಹಿತನ ಮನೆಗೆ ಊಟಕ್ಕೆ ಹೋಗಿದ್ದ ಹಾಲಪ್ಪ ಅಲ್ಲಿ ಸ್ನೇಹಿತನ ಪತ್ನಿ ಮೇಲೆ ಅತ್ಯಾಚಾರ ಮಾಡಿದ್ದ. ಈ ರೀತಿಯ ವ್ಯಕ್ತಿಯಾದ ನೀವು ಈಗ ನಾನು ಉಂಡಮನೆಗೆ ಮದ್ದು ಹಾಕುತ್ತೇನೆ ಎಂದು ಹೇಳುತ್ತೀಯಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶ್ವನಾಥ್ ನನ್ನನ್ನು ಅರೆಹುಚ್ಚ ಎಂದಿದ್ದಾರೆ. ನನ್ನಂತಹ ಅರೆಹುಚ್ಚನಿಂದಲೇ ನೀನು ಬಿಡಿಎ ಅಧ್ಯಕ್ಷ ಆಗಿದ್ದೀಯಾ? 10 ಸಾವಿರ ಬೆಡ್ಗಳ ಕೋವಿಡ್ ಕೇರ್ ಸೆಂಟರ್ನಲ್ಲಿ ಎಷ್ಟು ಹಣ ಹೊಡೆದಿದ್ದೀಯಾ? ಎಂದು ವಿಶ್ವನಾಥ್ ತೀವ್ರ ತರಾಟೆಗೆ ತೆಗೆದುಕೊಂಡರು.