ಬೆಂಗಳೂರು:ಬಿಜೆಪಿ ಕೇಂದ್ರ ಕಚೇರಿಯಲ್ಲಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಎದುರು ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಅಗತ್ಯ ಇದೆ ಎಂದು ಅಭಿಪ್ರಾಯ ಹೇಳಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದರು.
ಬಿಎಸ್ವೈ ಮಾರ್ಗದರ್ಶಕರಾಗಿರಲಿ, ಪಂಚಮಸಾಲಿ ಸಮುದಾಯದವರನ್ನು ಸಿಎಂ ಮಾಡಿ ಎಂದು ಅರುಣ್ ಸಿಂಗ್ ಮುಂದೆ ಹೆಚ್.ವಿಶ್ವನಾಥ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಆರೋಗ್ಯ ಸಮಸ್ಯೆ ಇದೆ. ಮೊದಲಿನ ಶಕ್ತಿ ಇಲ್ಲ. ಆಡಳಿತದಲ್ಲಿ ಕುಟುಂಬದ ಹಸ್ತಕ್ಷೇಪ, ಭ್ರಷ್ಟಾಚಾರ ಹೆಚ್ಚಾಗುತ್ತಿದೆ. ಸಾರ್ವಜನಿಕ ಅಭಿಪ್ರಾಯ ಸರ್ಕಾರದ ವಿರುದ್ಧವಾಗುತ್ತಿದೆ. ಈ ನಿಟ್ಟಿನಲ್ಲಿ ನಾಯಕತ್ವ ಬದಲಾವಣೆ ಆಗಲಿ ಎಂಬ ಸಲಹೆಯನ್ನು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ವಿವರಿಸಿದ್ದೇನೆ ಎಂದು ಹೆಚ್.ವಿಶ್ವನಾಥ್ ಹೇಳಿದರು.
ಮಠಾಧಿಪತಿಗಳು ಬಸವಣ್ಣ ತತ್ವ ಮೀರಿ ಹೋಗಬಾರದು. ಬಿಜೆಪಿಗೆ ಎಲ್ಲ ಜಾತಿ, ಧರ್ಮದವರು ಮತದಾನ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಒಂದು ವೇಳೆ ನಾಯಕತ್ವ ಬದಲಾವಣೆ ಆದರೆ ಪಂಚಮಸಾಲಿಗೆ ಮುಖ್ಯಮಂತ್ರಿ ಪಟ್ಟ ನೀಡಿ ಎಂದರು.