ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಮಾಜಿ ಸಚಿವ ಹೆಚ್.ಕೆ ಪಾಟೀಲ್ ಪತ್ರ ಬರೆದಿದ್ದು, ಸಿಎಂ ತಮ್ಮ ದೆಹಲಿ ಭೇಟಿಯನ್ನು ರದ್ದುಗೊಳಿಸಿ ಕೃಷ್ಣಾ ಕೊಳ್ಳದ ಪ್ರದೇಶದಲ್ಲಿ ಉಂಟಾಗಿರುವ ಪ್ರವಾಹದ ಕುರಿತು ಗಮನ ಹರಿಸುವಂತೆ ಪತ್ರ ಮುಖೇನ ಆಗ್ರಹಿಸಿದ್ದಾರೆ.
ಬಿಎಸ್ವೈ ಗೆ ಪತ್ರ ಬರೆದ ಹೆಚ್.ಕೆ. ಪಾಟೀಲ್ ಮಹಾರಾಷ್ಟ್ರದಿಂದ ಇಂದು 2.3 ಲಕ್ಷ ಕ್ಯೂಸೆಕ್ ನೀರು ಬಿಡುಗಡೆಯಾಗಿದೆ. ಇದರಿಂದ ರಾಜ್ಯದ ಗಡಿಭಾಗದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳಗಾವಿ ಜಿಲ್ಲೆಯ 37 ಗ್ರಾಮಗಳು ಪ್ರವಾಹದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿವೆ ಎಂದು ಹೆಚ್ ಕೆ ಪಾಟೀಲ್ ವಿವರಿಸಿದ್ದಾರೆ.
ರಾಜ್ಯದಲ್ಲಿ ಸಂಕಷ್ಟ ಪರಿಸ್ಥಿತಿ ಇದ್ದರೂ ಸರ್ಕಾರ ವಿಪತ್ತು ನಿರ್ವಹಣೆಗೆ ಸಿದ್ಧವಾಗಿಲ್ಲ. ಎನ್ಡಿಆರ್ಎಫ್ ಹಾಗೂ ದೋಣಿ ರಕ್ಷಣಾ ತಂಡಗಳನ್ನು ಸನ್ನದ್ಧವಾಗಿಡಬೇಕು. ದೆಹಲಿ ಪ್ರವಾಸವನ್ನು ರದ್ದುಗೊಳಿಸಿ, ಪ್ರವಾಹ ಪ್ರದೇಶಗಳತ್ತ ಗಮನ ನೀಡಿ, ಪ್ರಧಾನಿ ಅವರ ಭೇಟಿಗೂ ಒತ್ತಾಯಿಸುವಂತೆ ಮಾಜಿ ಸಚಿವ ಆಗ್ರಹಿಸಿದ್ದಾರೆ.
ಹೆಚ್.ಕೆ ಪಾಟೀಲ್ ಪತ್ರ ಬರೆದ ಬೆನ್ನಲ್ಲೇ ಸಿಎಂ ಇಂದು ಪ್ರವಾಹ ಪೀಡಿತ ಐದು ಜಿಲ್ಲೆಗಳ ಡಿಸಿ ಜೊತೆ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ತುರ್ತು ವಿಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ. ಅಲ್ಲದೆ ನಾಳೆ ಹೆಲಿಕಾಪ್ಟರ್ ಮೂಲಕ ಕೃಷ್ಣಾ ನದಿ ಪ್ರವಾಹ ಪ್ರದೇಶಗಳನ್ನು ವೀಕ್ಷಿಸಲಿದ್ದಾರೆ.