ಬೆಂಗಳೂರು: ಅನರ್ಹ ಶಾಸಕ ಗೋಪಾಲಯ್ಯ ಪೊಲೀಸರನ್ನೂ ಕೂಡಾ ರೌಡಿಸಂಗೆ ಬಳಸಿಕೊಂಡು, ಕಾರ್ಯಕರ್ತರ ಮನೆಗೆ ಹೋಗಿ ಧಮ್ಕಿ ಹಾಕುತ್ತಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.
ಕಾಮಾಕ್ಷಿಪಾಳ್ಯದಲ್ಲಿರುವ ಬಿಜೆಪಿ ಮುಖಂಡ ರಾಜಣ್ಣ ನಿವಾಸದಲ್ಲಿ ಅವರನ್ನು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಳಿಸಿದ ಬಳಿಕ ಮಾತನಾಡಿದ ಕುಮಾರಸ್ವಾಮಿ, ಜೆಡಿಎಸ್ ಪಕ್ಷಕ್ಕೆ ಹಾಗೂ ಗಿರೀಶ್ ಕೆ.ನಾಶಿಯವರನ್ನು ಗೆಲ್ಲಿಸಿ ಕೊಡಲು ರಾಜಣ್ಣ ಪಕ್ಷ ಸೇರಿದ್ದಾರೆ ಎಂದರು.
ಕೆ. ಗೋಪಾಲಯ್ಯ ವಿರುದ್ಧ ಮಾಜಿ ಸಿಎಂ ಹೆಚ್ಡಿಕೆ ಆರೋಪ ಬಳಿಕ ಗೋಪಾಲಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಗೋಪಾಲಯ್ಯ, ಪೊಲೀಸರನ್ನೂ ಕೂಡಾ ರೌಡಿಸಂಗೆ ಬಳಸಿಕೊಂಡು, ಕಾರ್ಯಕರ್ತರ ಮನೆಗೆ ಹೋಗಿ ಧಮ್ಕಿ ಹಾಕುತ್ತಿದ್ದಾರೆ. ಕಾರ್ಯಕರ್ತರು ಭಯಪಡಬೇಕಾಗಿಲ್ಲ, ಮಧ್ಯರಾತ್ರಿ ಕರೆದ್ರೂ ನಾನು ಬರಲು ಸಿದ್ಧ ಎಂದರು. ಇನ್ನು ಒಟ್ಟು ಇಲ್ಲಿಯವರೆಗೆ 1300 ಕೋಟಿ ರೂ. ಅನುದಾನವನ್ನು ಮಹಾಲಕ್ಷ್ಮಿ ಕ್ಷೇತ್ರಕ್ಕೆ ಕೊಡಲಾಗಿದೆ. ಗೋಪಾಲಯ್ಯ ಯಾವ್ಯಾವ ಗುತ್ತಿಗೆದಾರರನ್ನು ಹೆದರಿಸಿ, ಬಕಾಸುರನ ಹಾಗೆ ದುಡ್ಡು ತಿಂದಿದಾರೆ ಅನ್ನೋದು ಗೊತ್ತಿದೆ. ನಾನೂ 500 ಕೋಟಿ ರೂ. ಅನುದಾನ ಕೊಟ್ಟಿದ್ದೆ ಎಂದು ಹೆಚ್ಡಿಕೆ ಆರೋಪಿಸಿದರು.
ಅಲ್ಲದೆ ಪಕ್ಷ ತೊರೆದಿರುವ ಕಾರ್ಪೋರೇಟರ್ಗಳ ವಿರುದ್ಧವೂ ಕಿಡಿಕಾರಿ, ಮಹದೇವ್ ಹೆಬ್ಬೆಟ್ಟು, ಪಾಪ ಅವರಿಗೆ ತೆರಿಗೆ ಮತ್ತು ಸ್ಥಾಯಿ ಸಮಿತಿ ಕೊಟ್ಟೆವು. ಹೇಮಲತಾ ಅವ್ರಿಗೂ ಉಪಮೇಯರ್ ಸ್ಥಾನ ಕೊಟ್ಟೆವು. ಜೆಡಿಎಸ್ ಏನು ಕಡಿಮೆ ಮಾಡಿದೆ ಅವರಿಗೆ ಎಂದು ಪ್ರಶ್ನಿಸಿದರು.
ಸದಾನಂದ ಗೌಡರ ಟೀಕೆಗೂ ಪ್ರತಿಕ್ರಿಯಿಸಿ, ಸದಾನಂದ ಗೌಡರು ನರೇಂದ್ರ ಮೋದಿ ಹೆಸರಲ್ಲಿ ರಾಜಕೀಯ ಮಾಡ್ತಿದಾರೆ. ಸದಾನಂದ ಗೌಡರದ್ದು ನಕಲಿ ಶಾಮನ ಮಾತುಗಳು. ನಾವು ಒಂದೊಂದು ಓಟಿಗೂ, ಬೆವರು ಸುರಿಸಿ ಪಕ್ಷ ಕಟ್ಟಿದ್ದೇವೆ ಎಂದರು. ಚುನಾವಣಾ ಫಲಿತಾಂಶದಲ್ಲಿ ಗೊತ್ತಾಗಲಿದೆ. ಹದಿನೈದೂ ಕ್ಷೇತ್ರದಲ್ಲಿ ಅನರ್ಹರು ಸೋಲಬೇಕು. ಮಹಾರಾಷ್ಟ್ರ, ಗುಜಾರಾತ್ನಲ್ಲಿ ಪಕ್ಷಾಂತರಿಗಳು ನೆಲಕಚ್ಚಿದಾರೆ. ರಾಜ್ಯದಲ್ಲೂ ಅದೇ ಆಗಲಿದೆ. ಕಾಂಗ್ರೆಸ್-ಬಿಜೆಪಿಗಿಂತ ಸಂಖ್ಯೆಯಲ್ಲಿ ಜೆಡಿಎಸ್ ಹೆಚ್ಚಿರುತ್ತದೆ. ಈ ಬಾರಿ ಅಚ್ಚರಿ ಫಲಿತಾಂಶ ಜನ ನೀಡ್ತಾರೆ ಎಂದರು.