ಬೆಂಗಳೂರು: ಇವತ್ತಿನ ಕೇಂದ್ರ ಸರ್ಕಾರದ ಬಜೆಟ್ ಅತ್ಯಂತ ನಿರಾಶಾದಾಯಕವಾಗಿದ್ದು, ದೇಶಕ್ಕೆ ಮಾರಕವಾಗುತ್ತದೆಯೇ ಹೊರತು ಅಭಿವೃದ್ಧಿಗೆ ಪೂರಕವಾದ ಬಜೆಟ್ ಅಲ್ಲವೆಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಜೆಪಿ ನಗರದ ತಮ್ಮ ನಿವಾಸದ ಬಳಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ, ಕೇಂದ್ರದ ಬಜೆಟ್ ಕುರಿತು ಪ್ರತಿಕ್ರಿಯಿಸಿರುವ ಅವರು, ದೇಶದ ಪ್ರಗತಿಯನ್ನು ಮುಂದಿನ ದಿನಗಳಲ್ಲಿ ಆಸೆ ಇಟ್ಟುಕೊಳ್ಳಲಾಗದ ಕೇವಲ ಅಂಕಿ ಅಂಶಗಳ ಬಜೆಟ್ ಆಗಿದೆ ಎಂದು ಟೀಕಿಸಿದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಐದು ವರ್ಷಗಳಲ್ಲಿ ಘೋಷಣೆ ಮಾಡಿರುವ ಎಷ್ಟು ಯೋಜನೆಗಳು ಜಾರಿಯಾಗಿವೆ ಎಂಬುದನ್ನು ಹೇಳಿಲ್ಲ. ಹಣ ಹಂಚಿಕೆಯಲ್ಲೂ ಭಾರಿ ಕಡಿತವಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.
ಕೇಂದ್ರ ಸರ್ಕಾರದ ಬಜೆಟ್ ಕುರಿತು ಹೆಚ್. ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ ಜಲ ಮಿಷನ್‌ಗೆ ಮೀಸಲಿಟ್ಟಿರುವ ಹಣದಲ್ಲಿ ಯಾವುದೇ ಜನರಿಗೆ ಅನುಕೂಲ ಆಗಲ್ಲ. ಕೆಲವೊಂದು ಯೋಜನೆಗಳಿಗೆ ಇವತ್ತಿನ ಘೋಷಣೆಯಲ್ಲಿ ಹೊಸ ಹೆಸರು ಇಟ್ಟಿರಬಹುದು. ಕಿಸಾನ್ ಉಡಾನ್ ಹೆಸರಲ್ಲಿ ರೈತರನ್ನು ಆಕಾಶದ ಮೇಲೆ ಓಡಾಡಿಸ್ತಾರಾ? ಎಂದು ಹೆಚ್ಡಿಕೆ ವ್ಯಂಗ್ಯವಾಡಿದರು. ಯುವಕರಿಗೆ ಯಾವ ರೀತಿ ಉದ್ಯೋಗ ಕೊಡುತ್ತೇವೆಂದು ಈ ಬಜೆಟ್ನಲ್ಲಿ ಹೇಳಿಲ್ಲ. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇಂಟರ್ನಶಿಪ್ ಕೊಡುತ್ತೇವೆ ಅಂತ ಹೇಳಿದ್ದಾರೆ, ಆದರೆ ಅವರಿಗೆ ಉದ್ಯೋಗ ಕೊಡುವುದು ಯಾರು? ಎಂದು ಪ್ರಶ್ನಿಸಿದರು.
ಈ ಬಜೆಟ್ ಕುಸಿಯುತ್ತಿರುವ ದೇಶದ ಆರ್ಥಿಕ ಪ್ರಗತಿಯನ್ನು ಸರಿಪಡಿಸಲ್ಲ. ಮತ್ತಷ್ಟು ಅಧೋಗತಿಗೆ ತೆಗೆದುಕೊಂಡು ಹೋಗಲಾಗುತ್ತದೆ ಎಂದು ಕಿಡಿಕಾರಿದ ಹೆಚ್ ಡಿಕೆ, ಭೂಸ್ವಾಧೀನ ಕಾಯ್ದೆಯಲ್ಲಿ ಯಾರಿಗೆ ಬೇಕಾದರೂ ಭೂಮಿ ಕೊಡುತ್ತೇವೆಂದು ಹೇಳುತ್ತಿದ್ದಾರೆ. ಇದೊಂದು ಸಿಎಎ ರೀತಿಯಲ್ಲಿನ ಬಿಲ್ ಆಗುತ್ತದೆ ಅಷ್ಟೆ ಎಂದರು.