ಬೆಂಗಳೂರು:ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಇಂದು ತಮ್ಮ 89ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಇಂದು ಬೆಳಗ್ಗೆ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಜೆಪಿ ನಗರದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪುತ್ರರಾದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಹೆಚ್.ಡಿ.ರೇವಣ್ಣ ಶುಭ ಕೋರಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಹೆಚ್.ಕೆ.ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ನ ಹಲವು ನಾಯಕರು ಶುಭಾಶಯ ತಿಳಿಸಿದ್ದಾರೆ.
ದೇವೇಗೌಡರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ರಾಜ್ಯ ಬಿಜೆಪಿ ನಾಯಕರು ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.
'ಭಗವಂತ ಅವರಿಗೆ ಉತ್ತಮ ಆಯುರಾರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತಾ, ನಮ್ಮ ನಾಡಿಗೆ ಅವರ ಮಾರ್ಗದರ್ಶನ ಇನ್ನಷ್ಟು ದೀರ್ಘಕಾಲ ದೊರಕಲಿ ಎಂದು ಆಶಿಸುತ್ತೇನೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವಿಟ್ ಮಾಡಿ ಶುಭ ಕೋರಿದ್ದಾರೆ.
'ಹಿರಿಯರು, ಮಾಜಿ ಪ್ರಧಾನಮಂತ್ರಿಗಳು, ಆತ್ಮೀಯರಾದ ಹೆಚ್.ಡಿ.ದೇವೇಗೌಡ ಅವರಿಗೆ ಜನ್ಮದಿನದ ಹೃತೂರ್ವಕ ಶುಭಕಾಮನೆಗಳು. ಭಗವಂತನ ಅನುಗ್ರಹ ಸದಾ ತಮ್ಮ ಮೇಲಿರಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವಿಟ್ ಮಾಡಿ ಶುಭ ಕೋರಿದ್ದಾರೆ. ಅದೇ ರೀತಿ ಸಿಎಂ ಸಂಪುಟ ಸಹೋದ್ಯೋಗಿಗಳು, ಬಿಜೆಪಿ ನಾಯಕರು ಕೂಡ ದೇವೇಗೌಡರಿಗೆ ಶುಭ ಕೋರಿದ್ದಾರೆ.
ನಂಜಾವಧೂತ ಶ್ರೀಗಳಿಂದ ಶುಭಾಶಯ: ಪಟ್ಟನಾಯಕನಹಳ್ಳಿಯ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ನಂಜಾವಧೂತ ಸ್ವಾಮೀಜಿ ಇಂದು ಬೆಳಗ್ಗೆ ದೇವೇಗೌಡರ ನಿವಾಸಕ್ಕೆ ಆಗಮಿಸಿ ಮಾಜಿ ಪ್ರಧಾನಿಗಳ ಹುಟ್ಟುಹಬ್ಬಕ್ಕೆ ಶುಭಕೋರಿ ಆಶೀರ್ವದಿಸಿದರು.
ಇದನ್ನೂ ಓದಿ:89ನೇ ವಸಂತಕ್ಕೆ ಕಾಲಿಟ್ಟ ದೇವೇಗೌಡರು; ಜನ್ಮದಿನಕ್ಕೆ ಶುಭಕೋರಿದ ಪ್ರಧಾನಿ ಮೋದಿ