ಬೆಂಗಳೂರು: ಗಣ್ಯ ವ್ಯಕ್ತಿಗಳು ಮತ್ತು ವಿವಿಐಪಿಗಳಿಗೆ ಭದ್ರತೆ ನೀಡುವ ವಿಚಾರ ಗೌಪ್ಯವಾಗಿರುವ ಕಾರಣ ಅದರ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ. ಆದರೆ, ಬೆದರಿಕೆ ಇರುವಂತಹ ಶಾಸಕರಿಗೆ ಕೋರಿಕೆಯ ಮೇಲೆ ಗನ್ಮ್ಯಾನ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಗಣ್ಯ ವ್ಯಕ್ತಿಗಳಿಗೆ ಭದ್ರತೆ ನೀಡುವ ವಿಚಾರದ ಬಗ್ಗೆ ಕಾಂಗ್ರೆಸ್ ಸದಸ್ಯ ಆರ್.ಬಿ.ತಿಮ್ಮಾಪುರ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ಗೌಪ್ಯತೆಯ ದೃಷ್ಟಿಯಿಂದ ಹೆಚ್ಚು ಮಾಹಿತಿ ನೀಡಲು ಸಾಧ್ಯವಿಲ್ಲ. ರಾಷ್ಟ್ರಪತಿ, ಪ್ರಧಾನಿ, ಸಿಎಂ, ನ್ಯಾಯಮೂರ್ತಿ ಸೇರಿದಂತೆ ಗಣ್ಯರಿಗೆ ಶಿಷ್ಠಾಚಾರದ ಪ್ರಕಾರ ಭದ್ರತೆ ನೀಡಲಾಗುತ್ತಿದೆ. ಗಣ್ಯ ವ್ಯಕ್ತಿಗಳಿಗೆ ಬೇರೆ-ಬೇರೆ ದರ್ಜೆ ಭದ್ರತೆ ನೀಡುತ್ತಿದ್ದೇವೆ ಎಂದರು.
ಖಾಸಗಿ ವ್ಯಕ್ತಿಗಳಿಗೆ ಜೀವ ಬೆದರಿಕೆ ಇದ್ದರೆ ಭದ್ರತೆ ನೀಡುತ್ತೇವೆ. ಪ್ರತಿಷ್ಠೆಗೆ ತೆಗೆದುಕೊಳ್ಳುವವರಿಗೆ ಭದ್ರತೆ ನೀಡಲ್ಲ. ಸಿಎಂ ಮನೆ ಭದ್ರತೆಗೆ ನಿಯೋಜನೆಗೊಂಡ ಸಿಬ್ಬಂದಿ ಗಾಂಜಾ ಮಾರಾಟ ಮಾಡುತ್ತಿದ್ದ ಪ್ರಕರಣದಲ್ಲಿ ಈಗಾಗಲೇ ಕಾನೂನು ಕ್ರಮ ಆಗಿದೆ. ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕ್ರಮ ವಹಿಸಲಾಗಿದೆ ಎಂದು ಸಚಿವರು ಹೇಳಿದರು.
ಈ ವೇಳೆ ಆಯನೂರು ಮಂಜುನಾಥ್ ಮಧ್ಯಪ್ರವೇಶಿಸಿ, 200 ಜನ ಪ್ರತಿನಿಧಿಗಳಿಗೆ ಯಾಕೆ ಭದ್ರತಾ ಸಿಬ್ಬಂದಿ ನೀಡಲಾಗಿದೆ ಎಂದು ಪ್ರಶ್ನಿಸಿದರು. ಆಗ ಗೃಹ ಸಚಿವರು, ಯಾರು ಜೀವ ಭಯದಿಂದ ತಮ್ಮ ಕೆಲಸಕ್ಕೆ ಅಡ್ಡಿಯಾಗುತ್ತದೆ ಅಂತ ಮನವಿ ಮಾಡುತ್ತಾರೋ ಅವರಿಗೆ ಗನ್ಮ್ಯಾನ್ ನೀಡಲಾಗಿದೆ ಎಂದು ಸ್ಪಷ್ಟನೆ ನೀಡಿದರು.
347 ಕೆರೆಗಳು ಖಾಲಿ:ರಾಜ್ಯದಲ್ಲಿ 3,670 ಸಾವಿರ ಕೆರೆಗಳಿದ್ದು, ಮಳೆಯಾದರೆ ಮಾತ್ರ ಕೆರೆ ತುಂಬಲು ಸಾಧ್ಯ ಎನ್ನುವ ಸ್ಥಿತಿ ಇದೆ. ಸದ್ಯ 870 ಕೆರೆ ತುಂಬಿವೆ. 999 ಕೆರೆಗಳು ಅರ್ಧಕ್ಕಿಂತ ಹೆಚ್ಚು ಭರ್ತಿಯಾಗಿವೆ. 1,454 ಕೆರೆಗಳು ಶೇ.50ಕ್ಕಿಂತ ಕಡಿಮೆ ಭರ್ತಿಯಾಗಿವೆ. 347 ಕೆರೆಗಳು ಖಾಲಿ ಇವೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.