ಬೆಂಗಳೂರು :ಭೂಗತ ಪಾತಕಿ ರವಿಪೂಜಾರಿ ವಿಚಾರಣೆಯನ್ನು ಕೇರಳ ಪೊಲೀಸರು ಮುಗಿಸಿದ ಹಿನ್ನೆಲೆ ಗುಜರಾತ್ ಪೊಲೀಸರು ಬಾಡಿ ವಾರೆಂಟ್ ಮೇಲೆ ಕಸ್ಟಡಿ ಪಡೆಯಲು ಮುಂದಾಗಿದ್ದಾರೆ. ಮಹಾರಾಷ್ಟ್ರ, ಕೇರಳ ಬಳಿಕ ಗುಜರಾತ್ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್) ಕಸ್ಟಡಿ ನೀಡುವಂತೆ ಬೆಂಗಳೂರಿನ 62ನೇ ಸಿಸಿಹೆಚ್ಗೆ ಮನವಿ ಸಲ್ಲಿಸಿದೆ.
2017ರ ಜನವರಿಯಲ್ಲಿ ಗುಜರಾತ್‌ನ ಬೊರ್ಸಾದ್ ಕೌನ್ಸಿಲರ್ ಆಗಿದ್ದ ಪ್ರಗ್ನೇಶ್ ಪಟೇಲ್ ಎಂಬುವರ ಮೇಲೆ ಬೈಕ್ನಲ್ಲಿ ಬಂದ ಮೂವರು ಆಗಂತುಕರು ಗುಂಡಿನ ದಾಳಿ ನಡೆಸಿ ಕೊಲೆ ಮಾಡಿದ್ದರು. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮೂವರು ಸುಪಾರಿ ಹಂತಕರನ್ನು ಗುಜರಾತ್ ಎಟಿಎಸ್ ಅಧಿಕಾರಿಗಳು ಬಂಧಿಸಿದ್ದರು. ವಿಚಾರಣೆ ವೇಳೆ ಪಾತಕಿಯಾಗಿದ್ದ ರವಿಪೂಜಾರಿ ಪಾತ್ರ ಬೆಳಕಿಗೆ ಬಂದಿತ್ತು.
ಈ ಸಂಬಂಧ ಹೆಚ್ಚಿನ ತನಿಖೆಗಾಗಿ ಆರೋಪಿಯನ್ನು ವಶಕ್ಕೆ ನೀಡುವಂತೆ ಎಟಿಎಸ್ ಅಧಿಕಾರಿಗಳು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಹಿಂದೆ ರವಿಪೂಜಾರಿಯನ್ನ ಕೇರಳ ಪೊಲೀಸರು 8 ಎಂಟು ದಿನಗಳ ಕಾಲ ವಶಕ್ಕೆ ಪಡೆದುಕೊಂಡಿದ್ದರು. ಕೊಚ್ಚಿ ಬ್ಯೂಟಿ ಪಾರ್ಲರ್ ಮೇಲಿನ ಗುಂಡಿನ ದಾಳಿ ಪ್ರಕರಣದಡಿ ವಿಚಾರಣೆ ನಡೆಸಿದ್ದರು.
ಕರ್ನಾಟಕ ಹಾಗೂ ಮಹಾರಾಷ್ಟ್ರಗಳಲ್ಲಿ ಮೋಸ್ಟ್ ವಾಟೆಂಟ್ ಆಗಿದ್ದ ರವಿ ಪೂಜಾರಿ ಬಂಧನ ಭೀತಿಯಿಂದ ಎರಡು ದಶಕಗಳ ಹಿಂದೆ ದೇಶ ಬಿಟ್ಟು ಪರಾರಿಯಾಗಿದ್ದ. ಈತನ ಪತ್ತೆಗೆ ಪೊಲೀಸರು ಶೋಧ ಕಾರ್ಯ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಈ ನಡುವೆ ರಾಜ್ಯ ಗುಪ್ತಚರ ಇಲಾಖೆ ಅಧಿಕಾರಿಗಳ ನೀಡಿದ ಮಾಹಿತಿ ಮೇರೆಗೆ ಕಳೆದ ವರ್ಷ 2019 ಜ.19ರಂದು ಸೆನೆಗಲ್ ಪೊಲೀಸರು ಬಂಧಿಸಿದ್ದರು. ಆದರೆ, ಭಾರತಕ್ಕೆ ಆರೋಪಿಯನ್ನು ಹಸ್ತಾಂತರಿಸಲು ಕಾನೂನು ಸಮಸ್ಯೆ ಎದುರಾಗಿತ್ತು. ಅಂತಿಮವಾಗಿ ಕಾನೂನು ಹೋರಾಟ ಪ್ರಕ್ರಿಯೆ ಮುಗಿಸಿಕೊಂಡು ದೇಶಕ್ಕೆ ಕರೆತರುವಲ್ಲಿ ರಾಜ್ಯ ಪೊಲೀಸರು ಯಶಸ್ವಿಯಾಗಿದ್ದರು.