ಬೆಂಗಳೂರು: ಕೊರೊನಾ ಸಂದರ್ಭದಲ್ಲಿ ಮೃತಪಟ್ಟಿರುವ ರೈತರಿಗೆ ಅಪೆಕ್ಸ್ ಹಾಗೂ ಡಿಸಿಸಿ ಬ್ಯಾಂಕ್ಗಳಿಂದ ಒಂದು ಲಕ್ಷ ರೂ. ಸಾಲ ಮನ್ನಾ ಮಾಡುತ್ತೇವೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ಅಧ್ಯಕ್ಷ ಹಾಗೂ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ಕೋವಿಡ್ನಿಂದ ಮೃತಪಟ್ಟ ರೈತರ 1 ಲಕ್ಷ ರೂ. ಸಾಲ ಮನ್ನಾ: ಜಿ.ಟಿ.ದೇವೇಗೌಡ
ಕೇಂದ್ರ ಸರ್ಕಾರ ಸಹಕಾರ ಇಲಾಖೆಗೆ ಪ್ರತ್ಯೇಕ ಸಚಿವಾಲಯ ಹಾಗೂ ಸಚಿವರನ್ನು ನೀಡಿರುವುದನ್ನು ನಾನು ಸ್ವಾಗತಿಸುತ್ತೇನೆ ಮತ್ತು ಕೊರೊನಾದಿಂದ ಮೃತಪಟ್ಟಿರುವ ರೈತರಿಗೆ ಅಪೆಕ್ಸ್ ಹಾಗೂ ಡಿಸಿಸಿ ಬ್ಯಾಂಕ್ಗಳಲ್ಲಿ ಒಂದು ಲಕ್ಷ ರೂ. ಸಾಲ ಮನ್ನಾ ಶೀಘ್ರದಲ್ಲಿ ಮಾಡಲಾಗುವುದು ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.
ನಗರದಲ್ಲಿಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕೃಷಿ ಇಲಾಖೆಯಲ್ಲಿದ್ದ ಸಹಕಾರ ಇಲಾಖೆಯನ್ನು ಪ್ರತ್ಯೇಕ ಇಲಾಖೆಯನ್ನಾಗಿ ಮಾಡಬೇಕೆಂದು ಬಹಳ ವರ್ಷಗಳಿಂದ ಬೇಡಿಕೆ ಇತ್ತು. ಈಗ ಕೇಂದ್ರ ಸರ್ಕಾರ ಸಹಕಾರ ಇಲಾಖೆಗೆ ಪ್ರತ್ಯೇಕ ಸಚಿವಾಲಯ ಹಾಗೂ ಸಚಿವರನ್ನು ನೀಡಿರುವುದನ್ನು ನಾನು ಸ್ವಾಗತಿಸುತ್ತೇನೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಗಟ್ಟಿ ನಿರ್ಧಾರ ಮಾಡಿ ಸಹಕಾರ ಇಲಾಖೆಗೆ ಪ್ರತ್ಯೇಕ ಸಚಿವಾಲಯ ನೀಡಿದ್ದಾರೆ. ಅಮಿತ್ ಶಾ ಅವರು ಈ ಹೊಸ ಇಲಾಖೆಯ ಸಚಿವರಾಗಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸಹಕಾರ ಕ್ಷೇತ್ರ ಶಕ್ತಿಯುತವಾಗಿ ಬೆಳೆಯುತ್ತದೆ. ಇದು ಕೃಷಿ, ಕೈಗಾರಿಕೆ, ಗುಡಿ ಕೈಗಾರಿಕೆ, ತೋಟಗಾರಿಕೆ ಪ್ರತಿಯೊಂದು ಕ್ಷೇತ್ರಕ್ಕೂ ಉದ್ಯೋಗ ಕೊಡುತ್ತದೆ. ಸಹಕಾರ ಕ್ಷೇತ್ರವನ್ನು ಭಾರತದ ಆರ್ಥಿಕತೆಯ ಹೆಬ್ಬಾಗಿಲು ಎಂದು ಜವಾಹರ್ ಲಾಲ್ ನೆಹರೂ ಸಹ ಹೇಳಿದ್ದಾರೆ ಎಂದರು.