ಬೆಂಗಳೂರು:ಜಿಎಸ್ಟಿ ನಷ್ಟ ಪರಿಹಾರ ಈ ಆರ್ಥಿಕ ವರ್ಷಕ್ಕೆ ಅಂತ್ಯವಾಗಲಿದೆ. ಈಗಾಗಲೇ ಕೋವಿಡ್ ಲಾಕ್ಡೌನ್ನಿಂದ ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯ ಸರ್ಕಾರ ಜಿಎಸ್ಟಿ ನಷ್ಟ ಪರಿಹಾರವನ್ನು ಮುಂದಿನ ಮೂರು ವರ್ಷಕ್ಕೆ ವಿಸ್ತರಿಸಲು ಮನವಿ ಮಾಡಿದೆ. ಅಷ್ಟಕ್ಕೂ ರಾಜ್ಯದಲ್ಲಿನ ಜಿಎಸ್ಟಿ ತೆರಿಗೆ ಸಂಗ್ರಹದ ಪ್ರಗತಿ ಹಾಗೂ ಆಗುತ್ತಿರುವ ನಷ್ಟ ಏನು ಎಂಬ ವರದಿ ಇಲ್ಲಿದೆ.
ಜಿಎಸ್ಟಿ ಏಕರೂಪದ ಈ ತೆರಿಗೆ ವ್ಯವಸ್ಥೆಯನ್ನು 2017ರಂದು ದೇಶಾದ್ಯಂತ ಜಾರಿಗೆ ತರಲಾಗಿತ್ತು. ರಾಜ್ಯದಲ್ಲೂ ಜುಲೈ 2017ರಂದು ತೆರಿಗೆ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲಾಯಿತು. ಹಳೆಯ ತೆರಿಗೆ ಪದ್ಧತಿ ರದ್ದಾಗಿ ಹೊಸ ಪದ್ಧತಿ ಜಾರಿಗೆ ಬಂತು. ಮೊದಲ ಐದು ವರ್ಷಗಳ ಕಾಲ ಜಿಎಸ್ಟಿ ಪದ್ಧತಿ ಜಾರಿಯಿಂದ ರಾಜ್ಯ ಸರ್ಕಾರಗಳು ಅನುಭವಿಸುವ ತೆರಿಗೆ ನಷ್ಟವನ್ನು ಭರಿಸಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಅದರಂತೆ 2021-22ವರೆಗೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಜಿಎಸ್ಟಿ ನಷ್ಟ ಪರಿಹಾರ ನೀಡಲು ತೀರ್ಮಾನಿಸಿತ್ತು.
ಜಿಎಸ್ಟಿ ತೆರಿಗೆ ಪದ್ಧತಿಯಿಂದ ಅಭಿವೃದ್ಧಿಯಲ್ಲಿ ಅಗ್ರಗಣ್ಯವಾಗಿರುವ ಕರ್ನಾಟಕದಂತಹ ರಾಜ್ಯಗಳು ತೆರಿಗೆ ಸಂಗ್ರಹದಲ್ಲಿ ಕುಸಿತ ಕಾಣುವಂತಾಯಿತು. ಇದಕ್ಕಾಗಿ ಕೇಂದ್ರ ಸರ್ಕಾರ ಐದು ವರ್ಷಗಳಿಗೆ ಜಿಎಸ್ಟಿ ನಷ್ಟ ಪರಿಹಾರ ಕೊಡಲು ನಿರ್ಧರಿಸಿತ್ತು. ನಷ್ಟ ಪರಿಹಾರ ನೀಡಲು 2015-16ರ ಆರ್ಥಿಕ ವರ್ಷವನ್ನು ಜಿಎಸ್ಟಿ ತೆರಿಗೆ ಪದ್ಧತಿ ಜಾರಿ ಬಳಿಕ ಉಂಟಾಗುವ ತೆರಿಗೆ ಕೊರತೆ ಭರಿಸುವಾಗಿನ ಮಾನದಂಡವಾಗಿ ಪರಿಗಣಿಸಲಾಯಿತು.ಅದಕ್ಕನುಗುಣವಾಗಿ ತೆರಿಗೆ ಕೊರತೆ ಭರಿಸಲು ನಷ್ಟ ಪರಿಹಾರ ನೀಡುವ ಭರವಸೆಯನ್ನು ನೀಡಿತು. ಅದರಂತೆ 2015-16ರ ಆದಾಯವನ್ನು 36,144 ಕೋಟಿ ರೂ. ಎಂದು ಲೆಕ್ಕಹಾಕಲಾಯಿತು. 2022 ಮಾರ್ಚ್ಗೆ ನಷ್ಟ ಪರಿಹಾರ ಅಂತ್ಯವಾಗಲಿದೆ. ಈ ನಷ್ಟ ಪರಿಹಾರ ಮೊತ್ತ ಕೊಡುವುದನ್ನು ಮುಂದಿನ ಮೂರು ವರ್ಷಗಳಿಗೆ ವಿಸ್ತರಿಸಲು ಸಿಎಂ ಬೊಮ್ಮಾಯಿ ಕೇಂದ್ರಕ್ಕೆ ಮನವಿ ಮಾಡಿದ್ದಾರೆ.
ಜಿಎಸ್ಟಿ ಸಂಗ್ರಹದ ಪ್ರಗತಿ ಹೇಗಿದೆ?:2017-18ರ ಜುಲೈನಲ್ಲಿ ಜಿಎಸ್ಟಿ ಅನುಷ್ಠಾನವಾಗಿತ್ತು. 2017-18ರಲ್ಲಿ ಕರ್ನಾಟಕ 24,182 ಕೋಟಿ ರೂ. ಮಾತ್ರ ಸಂಗ್ರಹ ಮಾಡಿತ್ತು. 2018-19ರಲ್ಲಿ ಸಂಗ್ರಹ 51,838.19 ಕೋಟಿ ರೂ. ಆಗಿತ್ತು. ಆ ಮೂಲಕ 14% ವೃದ್ಧಿ ಕಂಡಿತ್ತು. ಇನ್ನು 2019-20ರಲ್ಲಿ ಕರ್ನಾಟಕ 56,927.47 ಕೋಟಿ ರೂ. ಸಂಗ್ರಹ ಮಾಡಿ, 10% ವೃದ್ಧಿ ಕಂಡಿತ್ತು. ಇನ್ನು 2020-21ರಲ್ಲಿ ಜಿಎಸ್ಟಿ ಸಂಗ್ರಹವಾಗಿದ್ದು 65,659.39 ಕೋಟಿ ರೂ. ಅಂದರೆ 15% ವೃದ್ಧಿ ಕಂಡಿತ್ತು. ಇತ್ತ 2021-22ರಲ್ಲಿ ಜನವರಿ ವರೆಗೆ ಜಿಎಸ್ಟಿ ಸಂಗ್ರಹ 65,964.44 ಕೋಟಿ ರೂ. ಆಗಿದೆ. ಆ ಮೂಲಕ ಸಂಗ್ರಹದಲ್ಲಿ 28.73% ವೃದ್ಧಿ ಕಂಡಿತು.ತೆರಿಗೆ ಕೊರತೆಯನ್ನು ನೀಗಿಸಲು ಪ್ರತಿವರ್ಷ ಜಿಎಸ್ಟಿ ಸಂಗ್ರಹದ ವೃದ್ಧಿ 25-30% ಆಗಿರಬೇಕು. ಆದರೆ, ಐದು ವರ್ಷವಾದರೂ ಜಿಎಸ್ಟಿ ಸಂಗ್ರಹದಿಂದ ತೆರಿಗೆ ಕೊರತೆ ಸರಿದೂಗಿಸಲು ಕರ್ನಾಟಕಕ್ಕೆ ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಸೊರಗಿದ ಆರ್ಥಿಕತೆ ಹಿನ್ನೆಲೆ ಮುಂದಿನ ಮೂರು ವರ್ಷಗಳ ವರೆಗೆ ನಷ್ಟ ಪರಿಹಾರ ವಿಸ್ತರಿಸಲು ರಾಜ್ಯ ಸರ್ಕಾರ ಬಲವಾಗಿ ಆಗ್ರಹಿಸುತ್ತಿದೆ.