ಬೆಂಗಳೂರು :ನೆಲ, ಜಲ, ಗಾಳಿ ಸೇರಿದಂತೆ ರಾಜ್ಯದ ಪರಿಸರ ಸಂರಕ್ಷಣೆಯಲ್ಲಿ ಹಸಿರು ನ್ಯಾಯಪೀಠಗಳು ನೀಡಿರುವ ಆದೇಶಗಳು, ತೀರ್ಪುಗಳು ಅವಿಸ್ಮರಣೀಯ. ವಿಶ್ವ ಪರಿಸರ ದಿನವಾದ ಇಂದು ಹಸಿರು ನ್ಯಾಯಪೀಠಗಳು ನೀಡಿದ ಕೆಲ ಆದೇಶಗಳ ಕುರಿತು ಖ್ಯಾತ ವಕೀಲರು ಈಟಿವಿ ಭಾರತದೊಂದಿಗೆ ಹಂಚಿಕೊಂಡಿರುವ ಮಾಹಿತಿ ಇಲ್ಲಿದೆ.
ಓದಿ: ಗೂಗಲ್ ಆಯ್ತು.. ಇದೀಗ ಮತ್ತೊಂದು ಇ-ಕಾಮರ್ಸ್ ಸಂಸ್ಥೆಯಿಂದ ಕನ್ನಡಕ್ಕೆ ಅವಮಾನ: ಕನ್ನಡಿಗರ ಆಕ್ರೋಶ..!
ರಾಜ್ಯದಲ್ಲಿ ಇಂದು ಕೆರೆಗಳು, ಅರಣ್ಯ ಪ್ರದೇಶಗಳು ಉಳಿದಿದ್ದರೆ, ಸ್ವಲ್ಪಮಟ್ಟಿಗಾದರೂ ಪರಿಸರ ಚೆನ್ನಾಗಿದ್ದರೆ ಅದಕ್ಕೆ ಹಸಿರು ಪೀಠಗಳು ನೀಡಿರುವ ಆದೇಶಗಳೇ ಕಾರಣ ಎಂದು, ಒಂದೇ ಸಾಲಿನಲ್ಲಿ ಹಸಿರು ನ್ಯಾಯಪೀಠಗಳ ಕೊಡುಗೆಯ ಬಗ್ಗೆ ವಿವರಿಸುತ್ತಾರೆ ಹಿರಿಯ ವಕೀಲ ಎ.ಎಸ್ ಪೊನ್ನಣ್ಣ.
ಇಂದು ಗ್ರೀನ್ ಬೆಂಚ್ ಮುಂದೆ ಸಾವಿರಾರು ಪ್ರಕರಣಗಳಿವೆ. ರಾಜ್ಯದ ನೆಲ, ಜಲ, ಗಾಳಿ, ಅರಣ್ಯ ಸಂರಕ್ಷಣೆಗೆ ಸಂಬಂಧಿಸಿದಂತೆ ಹಸಿರು ಪೀಠ ನೂರಾರು ತೀರ್ಪುಗಳನ್ನು ನೀಡಿದೆ. ಅದರ ಪರಿಣಾಮವಾಗಿ ಇಂದು ಕೆರೆಗಳು ಉಳಿದಿವೆ. ಕೆರೆಗಳ ನಡುವೆ ಅನಗತ್ಯವಾಗಿ ನಿರ್ಮಾಣವಾಗುತ್ತಿದ್ದ ಐಲ್ಯಾಂಡ್‌ಗಳ ಕಾಮಗಾರಿ ರದ್ದಾಗಿದೆ, ಇಲ್ಲದಿದ್ದರೆ ಅನಗತ್ಯ ಕಾಮಗಾರಿ ನಡೆಸಿ ಕೆರೆಗಳನ್ನು ಮುಚ್ಚಿ ಹಾಕುತ್ತಿದ್ದರು.
ಹಾಗೆಯೇ, ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಹಸಿರು ಪೀಠ ಹಲವು ನಿರ್ದೇಶನ ನೀಡಿದೆ. ಅದರ ಪರಿಣಾಮವಾಗಿ ಇಂದು ನಗರಗಳು ಸ್ವಚ್ಛವಾಗಿವೆ. ಹಿಂದೆ ಬಾಟಲಿಗಳ ಮೇಲೆ ಪ್ಲಾಸ್ಟಿಕ್ ಲೇಬಲ್ ಹಾಕುತ್ತಿದ್ದರು. ಇದು ಪರಿಸರಕ್ಕೆ ಮಾರಕವಾಗಿತ್ತು. ಇಂತಹ ಲೇಬಲ್ ತಯಾರಿಕೆಗೆ ಸಂಬಂಧಿಸಿದ ಟೆಂಡರ್ ವಿವಾದ ನ್ಯಾಯಾಲಯದ ಮೆಟ್ಟಿಲೇರಿತ್ತು.
ಪ್ಲಾಸ್ಟಿಕ್ ಬಳಸಿ ಲೇಬಲ್ ತಯಾರಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಪೀಠ ಪ್ಲಾಸ್ಟಿಕ್ ಲೇಬಲ್ ತಯಾರಿಕೆಯನ್ನೇ ರದ್ದು ಮಾಡಿತು. ಅರಣ್ಯ ಪ್ರದೇಶಗಳೇನಾದರೂ ಉಳಿದಿದ್ದರೆ ಅದಕ್ಕೆ ಹಸಿರು ಪೀಠಗಳೇ ಕಾರಣ.
ಅರಣ್ಯ ಒತ್ತುವರಿಗೆ ಕಡಿವಾಣ ಹಾಕಿದ್ದು, ಅರಣ್ಯದ ನಡುವೆ ಕೈಗೊಂಡ ನೂರಾರು ಕಾಮಗಾರಿಗಳನ್ನ ಹಸಿರು ಪೀಠ ರದ್ದು ಮಾಡಿದೆ. ಬಂಡೀಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ಸಂಚಾರ ಸ್ಥಗಿತಗೊಳಿಸಿದ್ದು ಕೂಡ ಹಸಿರು ಪೀಠ ಎನ್ನುತ್ತಾರೆ ಪೊನ್ನಣ್ಣ.
ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಹಲವು ಪ್ರಕರಣಗಳಲ್ಲಿ ವಾದ ಮಂಡಿಸುತ್ತಿರುವ ವಕೀಲ ಪ್ರಿನ್ಸ್ ಐಸಾಕ್ ಕೂಡ ಹಸಿರು ಪೀಠಗಳ ಕುರಿತು ಶ್ಲಾಘಿಸುತ್ತಾರೆ. ಸ್ವಚ್ಛ ಪರಿಸರದಲ್ಲಿ ಬದುಕುವುದು ಸಂವಿಧಾನ ನೀಡಿರುವ ಮೂಲಭೂತ ಹಕ್ಕು. ಪರಿಸರವನ್ನು ಮಲಿನಗೊಳಿಸಿ ಇಂತಹ ಹಕ್ಕು ಉಲ್ಲಂಘನೆಯಾಗದಂತೆ ಹಸಿರು ಪೀಠಗಳು ಹಲವು ಆದೇಶಗಳನ್ನು ನೀಡಿವೆ.
ಕೆಸಿ ವ್ಯಾಲಿ ಯೋಜನೆ ಮೂಲಕ ಬೆಂಗಳೂರಿನ ತ್ಯಾಜ್ಯ ನೀರನ್ನ ಕೋಲಾರ, ಚಿಕ್ಕಬಳ್ಳಾಪುರದ ಕೆರೆಗಳಿಗೆ ಹರಿಸಲಾಗುತ್ತಿತ್ತು. ಇಂತಹ ನೀರು ಕೆರೆಗಳಲ್ಲಿ ತುಂಬಿ ಅಂತರ್ಜಲ ಕೂಡ ಮಲಿನವಾಗುತ್ತಿತ್ತು. ಇದನ್ನು ಪ್ರಶ್ನಿಸಿ ಹಸಿರು ಪೀಠಕ್ಕೆ ಅರ್ಜಿ ಸಲ್ಲಿಸಿದ್ದೇವೆ. ನೀರಿನ ಗುಣಮಟ್ಟ ಕಾಯ್ದುಕೊಳ್ಳಲು ತಾಕೀತು ಮಾಡಿರುವ ಹಸಿರು ನ್ಯಾಯಪೀಠ, ಇದೀಗ ಯೋಜನೆಯ ವೈಜ್ಞಾನಿಕ ಸಮೀಕ್ಷೆಗೆ ಆದೇಶಿಸಿದೆ.
ಪಶ್ಚಿಮಘಟ್ಟದ ಜೀವ ವೈವಿಧ್ಯತೆಗೆ ಧಕ್ಕೆ ತರುವ ಹಾಗೂ ಮರಗಳನ್ನು ತೆರವು ಮಾಡುವ ಮೂಲಕ ಬೆಳಗಾವಿ-ಪಣಜಿ ರಾಷ್ಟ್ರೀಯ ಹೆದ್ದಾರಿ-4ಎ ಕಾಮಗಾರಿ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದು, ಕಾಮಗಾರಿಗೆ ಹಸಿರು ಪೀಠ ತಡೆ ನೀಡಿದೆ. ಅಂತೆಯೇ ಪಶ್ಚಿಮಘಟ್ಟದ ಅರಣ್ಯಕ್ಕೆ ಹಾನಿ ಮಾಡಲಿದ್ದ ಶಿರಸಿ-ಕುಮಟಾ ಹೆದ್ದಾರಿ-766ಇ ಕಾಮಗಾರಿಗೂ ತಡೆ ನೀಡಿದೆ.
ಒಂದು ಕಾಲಕ್ಕೆಬೆಳ್ಳಂದೂರು ಕೆರೆಯ ನೀರು ಕುಡಿಯಲು ಬಳಕೆಯಾಗುತ್ತಿತ್ತು. ಇದೀಗ ಅಲ್ಲಿ ಬೆಂಕಿ ಹೊತ್ತಿಕೊಳ್ಳುತ್ತಿದೆ. ಈ ಕೆರೆಗೆ ಯಾವುದೇ ತ್ಯಾಜ್ಯ ನೀರು ಹರಿಸದಂತೆ ಆದೇಶಿಸಿದ್ದೇ ಹಸಿರು ಪೀಠ. ಬೆಂಗಳೂರಿನಲ್ಲಿಂದು ವಾಯು ಮತ್ತು ಶಬ್ಧ ಮಾಲಿನ್ಯ ಮಿತಿ ಮೀರಿದೆ. ಅದಕ್ಕೆ ಕಡಿವಾಣ ಹಾಕಲು ಸರ್ಕಾರಕ್ಕೆ ಹಲವು ನಿರ್ದೇಶನ ನೀಡಿದೆ. ಹಲವು ಅರಣ್ಯಗಳ ಸಂರಕ್ಷಣೆ ಜತೆಗೆ ಆನೆ ಕಾರಿಡಾರ್ ಸಂರಕ್ಷಣೆಗೂ ಆದೇಶಿಸಿದೆ ಎನ್ನುತ್ತಾರೆ ಪ್ರಿನ್ಸ್ ಐಸಾಕ್.
ವೃಷಭಾವತಿ ನದಿ ಇಂದು ಅಸ್ತಿತ್ವ ಕಳೆದುಕೊಳ್ಳುವ ಹಂತಕ್ಕೆ ಬಂದಿದ್ದು, ನದಿ ಚರಂಡಿಯಂತಾಗಿದೆ. ಇಂತಹ ನದಿ ಸಂರಕ್ಷಣೆಗೆ ವಕೀಲೆ ಗೀತಾ ಮಿಶ್ರಾ ಹಸಿರು ಪೀಠದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಹಾಗೆಯೇ, ಕೆರೆಗಳ ಸಂರಕ್ಷಣೆಗೂ ಕೋರಿದ್ದಾರೆ. ಕೋರಿಕೆ ಗಂಭೀರವಾಗಿ ಪರಿಗಣಿಸಿರುವ ಹಸಿರು ಪೀಠ, ನದಿ ಪುನಶ್ಚೇತನಗೊಳಿಸಲು ತಜ್ಞ ಸಂಸ್ಥೆ "ನೀರಿ" ಯಿಂದ ಸಮಗ್ರ ವರದಿ ಕೇಳಿದೆ. ಬೆಂಗಳೂರಿನ ಕೆರೆಗಳ ಸಂರಕ್ಷಣೆಗೂ "ನೀರಿ"ಯಿಂದ ವರದಿ ಕೇಳಿದೆ ಎನ್ನುತ್ತಾರೆ ಪ್ರಕರಣದಲ್ಲಿ ವಾದ ಮಂಡಿಸುತ್ತಿರುವ ವಕೀಲ ಜಿ.ಆರ್ ಮೋಹನ್.
ಏನಿದು ಹಸಿರು ನ್ಯಾಯಪೀಠ :ಅರಣ್ಯ ಹಾಗೂ ಪರಿಸರ ಸಂರಕ್ಷಣೆಗಾಗಿ ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್‌ಗಳು ತಮ್ಮಲ್ಲಿಯೇ ಪ್ರತ್ಯೇಕ ಹಸಿರು ಪೀಠಗಳನ್ನು ಸ್ಥಾಪಿಸಿವೆ. ಪರಿಸರಕ್ಕೆ ಸಂಬಂಧಿಸಿದ ಪ್ರಕರಣಗಳನ್ನೇ ಪ್ರತ್ಯೇಕವಾಗಿ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ 1995ರಲ್ಲಿ ಮೊದಲ ಹಸಿರು ಪೀಠ ರಚಿಸಿತ್ತು. ನಂತರ 1996ರಲ್ಲಿ ಚೆನ್ನೈ ಹೈಕೋರ್ಟ್‌ಗೆ ಹಸಿರು ಪೀಠ ಸ್ಥಾಪಿಸಲು ತಿಳಿಸಿತ್ತು.
ಆ ಬಳಿಕ ಹಲವು ಹೈಕೋರ್ಟ್‌ಗಳು ಪರಿಸರ ಸಂರಕ್ಷಣೆ ದೃಷ್ಟಿಯಿಂದ ತಮ್ಮಲ್ಲಿ ಹಸಿರು ಪೀಠಗಳನ್ನ ರಚಿಸಿವೆ. ಕರ್ನಾಟಕ ಹೈಕೋರ್ಟ್ ಕೂಡ ತನ್ನಲ್ಲಿ ಹಸಿರು ಪೀಠವನ್ನು ರಚಿಸಿದೆ. ಯಾವುದೇ ವಿಭಾಗೀಯ ಪೀಠ ಹಸಿರು ಪೀಠವಾಗಿ ಕಾರ್ಯ ನಿರ್ವಹಿಸಬಹುದಾಗಿದೆ. ಪ್ರಸ್ತುತ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ಪೀಠವೇ ಹಸಿರು ನ್ಯಾಯಪೀಠವಾಗಿ ಕಾರ್ಯ ನಿರ್ವಹಿಸುತ್ತಿದೆ.
ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಸಾವಿರಾರು ಪ್ರಕರಣಗಳನ್ನು ಅತ್ಯಂತ ಕಾಳಜಿಯಿಂದ ವಿಚಾರಣೆ ನಡೆಸುತ್ತಿದೆ. ರಾಜ್ಯದಲ್ಲಿನ ಅರಣ್ಯಗಳು, ನದಿಗಳ ಸಂರಕ್ಷಣೆಯಲ್ಲಿ ಮಹತ್ವದ ತೀರ್ಪುಗಳನ್ನು ನೀಡಿದೆ. ಇತ್ತೀಚೆಗೆ ನಗರದ ವರ್ತೂರು, ಬೆಳ್ಳಂದೂರು, ಅಗರ ಕೆರೆಗಳ ಸಂರಕ್ಷಣೆಗೆ, ವೃಷಭಾವತಿ ನದಿ ಪುನಶ್ಚೇತನಕ್ಕೆ, ಪಟಾಕಿ ಬಳಕೆಗೆ ಸಂಬಂಧಿಸಿದಂತೆ, ಬಿಬಿಎಂಪಿ ತ್ಯಾಜ್ಯ ವಿಲೇವಾರಿ ಕುರಿತಂತೆ ಪ್ರಮುಖ ಆದೇಶಗಳನ್ನ ಹೊರಡಿಸಿದೆ.