ಬೆಂಗಳೂರು:ಗ್ರಾಮ ಪಂಚಾಯಿತಿ ಚುನಾವಣೆಯ ರಾಜಕೀಯ ಅಖಾಡ ರಂಗೇರಿದೆ. ಗ್ರಾಪಂ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಇಂದು ಮುಕ್ತಾಯವಾಗಿದ್ದು, 3,021 ಗ್ರಾಪಂಗಳಿಗೆ 1.50 ಲಕ್ಷಕ್ಕೂ ಹೆಚ್ಚು ನಾಮಪತ್ರಗಳು ಸಲ್ಲಿಕೆಯಾಗಿವೆ.
ಡಿ.22ಕ್ಕೆ 3,021 ಗ್ರಾಪಂಗಳಿಗೆ ಮೊದಲ ಹಂತದ ಚುನಾವಣೆ: 1.50 ಲಕ್ಷಕ್ಕೂ ಹೆಚ್ಚು ನಾಮಪತ್ರ ಸಲ್ಲಿಕೆ - 1.50 ಲಕ್ಷಕ್ಕೂ ಹೆಚ್ಚು ನಾಮಪತ್ರ ಸಲ್ಲಿಕೆ
ಗ್ರಾಮ ಪಂಚಾಯಿತಿ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಇಂದು ಮುಕ್ತಾಯವಾಗಿದ್ದು, ಡಿಸೆಂಬರ್ 22 ರಂದು 3,021 ಗ್ರಾಪಂಗಳಿಗೆ ಮತದಾನ ನಡೆಯಲಿದೆ.
ನಾಮಪತ್ರಗಳ ಪರಿಶೀಲನೆ ಶನಿವಾರ ನಡೆಯಲಿದ್ದು, ಡಿಸೆಂಬರ್ 14 ರಂದು ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನವಾಗಿದೆ. ಮೊದಲ ಹಂತದ ಚುನಾವಣೆ ಡಿಸೆಂಬರ್ 22 ರಂದು ನಡೆಯಲಿದೆ. ರಾಜ್ಯ ಚುನಾವಣಾ ಆಯೋಗ ಘೋಷಣೆ ಪ್ರಕಾರ, ಮೊದಲು 2,930 ಗ್ರಾಪಂಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಸರ್ಕಾರ ಕೆಲವು ಗ್ರಾಪಂಗಳನ್ನು ನಗರ ಸ್ಥಳೀಯ ಸಂಸ್ಥೆಗಳಿಗೆ ಸೇರ್ಪಡೆ ಮಾಡಿತು. ಹಾಗಾಗಿ, 21 ಗ್ರಾಪಂಗಳ ಚುನಾವಣೆ ಕೈಬಿಡಲಾಗಿದೆ.
ಇನ್ನು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ನಡೆಯುವ 97 ಗ್ರಾಪಂಗಳ ಜೊತೆಗೆ ಎರಡನೇ ಹಂತದಲ್ಲಿ ನಡೆಯಬೇಕಿದ್ದ 112 ಪಂಚಾಯಿತಿಗಳ ಚುನಾವಣೆ ಮೊದಲ ಹಂತದಲ್ಲಿಯೇ ಘೋಷಣೆಯಾಗಿದೆ. 112 ಗ್ರಾಪಂ ಸೇರಿ ಒಟ್ಟು 3021 ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ.