ನವದೆಹಲಿ:ಕೇಂದ್ರ ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್ಗೆ 10 ರೂಪಾಯಿ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು 13 ರೂಪಾಯಿಗೆ ಏರಿಸಿದೆ. ಅಂತಾರಾಷ್ಟ್ರೀಯ ತೈಲಬೆಲೆಯಲ್ಲಿ ಎರಡು ದಶಕಗಳಲ್ಲೇ ಕನಿಷ್ಠ ಮಟ್ಟಕ್ಕೆ ಇಳಿದಿರುವುದೂ ಕೂಡಾ ಕೇಂದ್ರ ಸರ್ಕಾರಕ್ಕೆ ಮತ್ತಷ್ಟು ಆದಾಯ ತರುತ್ತದೆ.
ಕೇಂದ್ರ ಸರ್ಕಾರ ಎರಡು ತಿಂಗಳೊಳಗೆ ಎರಡನೇ ಬಾರಿಗೆ ಅಬಕಾರಿ ಸುಂಕವನ್ನು ಏರಿಕೆ ಮಾಡಿದ್ದು, 2019-20ರ ವರ್ಷದಲ್ಲಿ 1.7 ಲಕ್ಷ ಕೋಟಿ ಆದಾಯ ಕೇಂದ್ರ ಸರ್ಕಾರಕ್ಕೆ ಬಂದಿತ್ತು ಎಂದು ಮೂಲಗಳು ತಿಳಿಸಿವೆ. ಸಾರಿಗೆ ಮೇಲೆ ನಿರ್ಬಂಧದ ಹೊರತಾಗಿರೂ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕ ಹೆಚ್ಚಳದಿಂದಾಗಿ ಈ ಹಣಕಾಸು ವರ್ಷದಲ್ಲಿ ಸುಮಾರು 1.6 ಲಕ್ಷ ಕೋಟಿ ಬರಲಿದೆ ಎಂದು ಅಂದಾಜು ಮಾಡಲಾಗಿದೆ. ಮಾರ್ಚ್ 14ರಂದು ಪೆಟ್ರೋಲ್ ಹಾಗೂ ಡಿಸೇಲ್ ಮೇಲೆ ತಲಾ ಮೂರು ರೂಪಾಯಿ ಅಬಕಾರಿ ಸುಂಕ ಹೆಚ್ಚಳದ ಕಾರಣದಿಂದಾಗಿ 39 ಸಾವಿರ ಕೋಟಿ ರೂಪಾಯಿ ಆದಾಯ ಬಂದಿತ್ತು.
ಸರ್ಕಾರಿ ಸ್ವಾಮ್ಯದ ಇಂಧನ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೋರೇಷನ್ (ಐಓಸಿ), ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್(ಎಚ್‌ಪಿಸಿಎಲ್) ಮಾರ್ಚ್ 16ರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಇತ್ತೀಚೆಗೆ ಕಡಿಮೆ ಮಾಡಿದ್ದವು. ಈಗ ಅಬಕಾರಿ ಸುಂಕದ ಹೆಚ್ಚಳದಿಂದಾಗಿ ಹಾಗೂ ಅಂತಾರಾಷ್ಟ್ರೀಯ ತೈಲ ಬೆಲೆ ಇಳಿಯುತ್ತಿರುವ ಕಾರಣದಿಂದಾಗಿ ಸರ್ಕಾರ ಹಾಗೂ ಪೆಟ್ರೋಲಿಯಂ ಕಂಪನಿಗಳು ಲಾಭ ಗಳಿಸುತ್ತವೆ. ಅಬಕಾರಿ ಸುಂಕ ಹೆಚ್ಚಳದಿಂದಾಗಿ ಗ್ರಾಹಕರಿಗೆ ಲಾಭವಾಗುತ್ತಿಲ್ಲ.
ಕೇಂದ್ರ ಸರ್ಕಾರದ ಅಧಿಸೂಚನೆಯಂತೆ ಪೆಟ್ರೋಲ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಲೀಟರ್ಗೆ 2 ರೂಪಾಯಿ, ರಸ್ತೆ ತೆರಿಗೆಯನ್ನು ಒಂದು ಲೀಟರ್ಗೆ 8 ರೂಪಾಯಿ ಹೆಚ್ಚಿಸಲಾಗಿದೆ. ಡೀಸೆಲ್ ಮೇಲೆಯೂ ಹೆಚ್ಚುವರಿ ಅಬಕಾರಿ ಸುಂಕ ಲೀಟರ್ಗೆ 5 ರೂಪಾಯಿ, ರಸ್ತೆ ತೆರಿಗೆ ಲೀಟರ್ಗೆ 8 ರೂಪಾಯಿ ಹೆಚ್ಚಿಸಲಾಗಿದೆ. ಇದರಿಂದ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ 32.98 ರೂಪಾಯಿಗೆ ಹಾಗೂ ಡೀಸೆಲ್ನ ಬೆಲೆ 31.83ಕ್ಕೆ ಹೆಚ್ಚಳವಾಗಿದೆ.
ಭಾರತ ಸರ್ಕಾರವು ಪೆಟ್ರೋಲ್ ಮೇಲಿನ ತೆರಿಗೆಯನ್ನು ಬ್ಯಾರೆಲ್ಗೆ 21 ಡಾಲರ್ ಹಾಗೂ ಡೀಸೆಲ್ ಮೇಲಿನ ತೆರಿಗೆಯನ್ನು ಬ್ಯಾರೆಲ್ಗೆ 27 ಡಾಲರ್ ಹೆಚ್ಚಿಸಿದ್ದು ಇದರಿಂದ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಆದಾಯ ಬರಲಿದೆ. ಇದೇ ರೀತಿಯ ತೆರಿಗೆ ಸಂಗ್ರಹವನ್ನು ಕಾಪಾಡಿಕೊಂಡ್ರೆ ವರ್ಷಕ್ಕೆ ಸುಮಾರು 21 ಬಿಲಿಯನ್ ಡಾಲರ್ಗಳ ಆದಾಯ ಗಳಿಸಬಹುದು ಎಂದು ಮೂಡೀಸ್ ಇನ್ವೆಸ್ಟರ್ಸ್ ಸರ್ವೀಸ್ನ ಕಾರ್ಪೊರೇಟ್ ಹಣಕಾಸು ಹಿರಿಯ ಉಪಾಧ್ಯಕ್ಷ ವಿಕಾಸ್ ಹಲಾನ್ ಅಭಿಪ್ರಾಯಪಟ್ಟಿದ್ದಾರೆ.