ಬೆಂಗಳೂರು: ಮಸೀದಿ, ಮಂದಿರ, ಚರ್ಚ್ ಸೇರಿದಂತೆ ಧಾರ್ಮಿಕ ಸ್ಥಳಗಳು, ಪಬ್, ಬಾರ್, ರೆಸ್ಟೋರೆಂಟ್ಗಳಲ್ಲಿ ಸಾರ್ವಜನಿಕ ಬಳಕೆಯ ಧ್ವನಿವರ್ಧಕಗಳಿಗೆ ರಾಜ್ಯ ಸರ್ಕಾರ ಶಾಶ್ವತ ಪರವಾನಗಿ ನೀಡುವುದಿಲ್ಲ. ಎರಡು ವರ್ಷಗಳಿಗಷ್ಟೇ ಸೀಮಿತವಾಗುವಂತೆ ಲೈಸೆನ್ಸ್ ನೀಡಲಾಗುತ್ತದೆ. ನಂತರ ಪರವಾನಗಿಯನ್ನು ನವೀಕರಿಸಿಕೊಳ್ಳಬೇಕಾಗುತ್ತದೆ ಎಂದು ಧ್ವನಿವರ್ಧಕ ಬಳಕೆ ಬಗ್ಗೆ ರೂಪಿಸಿರುವ ನಿಯಮಾವಳಿಗಳ ಬಗ್ಗೆ ಹೈಕೋರ್ಟ್ಗೆ ರಾಜ್ಯ ಸರ್ಕಾರ ವರದಿ ಸಲ್ಲಿಸಿದೆ.
ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆ ತನಕ ಧ್ವನಿವರ್ಧಕಗಳ ಬಳಕೆಗೆ ವಿಶೇಷ ಸಂದರ್ಭ ಹೊರತುಪಡಿಸಿ ಅವಕಾಶ ಇರುವುದಿಲ್ಲ, ಬೆಳಗ್ಗೆ ಆರು ಗಂಟೆಗೂ ಮುಂಚಿತವಾಗಿ ಧ್ವನಿವರ್ಧಕ ಉಪಯೋಗಿಸುವುದು ಕಾನೂನು ಬಾಹಿರವಾಗಿರುತ್ತದೆ ಎಂದು ಸರ್ಕಾರ ನ್ಯಾಯಾಲಯದ ಗಮನಕ್ಕೆ ತಂದಿದೆ.
ಬೆಂಗಳೂರಿನ ಕೆಲವು ಮಸೀದಿಗಳು ಧ್ವನಿವರ್ಧಕ ಬಳಸಿ ಶಬ್ದ ಮಾಲಿನ್ಯ ಮಾಡುತ್ತಿವೆ, ಇದಕ್ಕೆ ಕಡಿವಾಣ ಹಾಕಬೇಕು ಎಂದು ಪಿ.ರಾಕೇಶ್ ಸೇರಿದಂತೆ ಹಲವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು. ಧ್ವನಿವರ್ದಕಗಳ ಬಳಕೆ ಹೇಗಿರಬೇಕು, ಯಾವಾಗ ಬಳಸಬೇಕು, ಯಾವಾಗ ಬಳಸಬಾರದು ಎನ್ನುವುದರ ಬಗ್ಗೆ ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆ ಅಭಿಯಾನ ಕೈಗೊಂಡು ನ್ಯಾಯಾಲಯಕ್ಕೆ ವರದಿ ಸಲ್ಲಿಸಬೆಕೆಂದು ವಿಚಾರಣೆ ವೇಳೆ ನಿರ್ದೇಶನ ನೀಡಿದೆ.
ಧ್ವನಿವರ್ಧಕ ಬಳಕೆ ನಿಯಮದಲ್ಲೇನಿದೆ..?ಧಾರ್ಮಿಕ ಸ್ಥಳಗಳು, ಪಬ್ಸ್, ರೆಸ್ಟೋರೆಂಟ್ ಮತ್ತಿತರ ಕಡೆ ಧ್ವನಿವರ್ಧಕದ ದುರ್ಬಳಕೆ ಮಾಡದಂತೆ ತಡೆಯಲು ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯನ್ನು ದಾಖಲೆಯಲ್ಲಿ ಸ್ವೀಕರಿಸಲಾಗಿದೆ ಎಂದು ಹೈಕೋರ್ಟ್ ಸರಕಾರದ ಗಮನಕ್ಕೆ ತಂದಿತು. ಧ್ವನಿವರ್ಧಕ ಬಳಕೆಗೆ ಶಬ್ದ ಮಾಲಿನ್ಯ (ಸುಧಾರಣೆ ನಿಯಂತ್ರಣ) 2000ರ ನಿಯಮ 5 ಜೊತೆಗೆ ಕರ್ನಾಟಕ ಪೊಲೀಸ್ ಕಾಯಿದೆಯ 1963ರ ಸೆಕ್ಷನ್ 37ರ
ಅಡಿ ಅನುಮತಿ ನೀಡಲಾಗಿದೆ. ರಾತ್ರಿ 10ರಿಂದ ಬೆಳಿಗ್ಗೆ 6ವರೆಗೆ ಧ್ವನಿವರ್ಧಕ ಮತ್ತು ಸಾರ್ವಜನಿಕರನ್ನು ಉದ್ದೇಶಿಸಲು ಬಳಸುವ ಸಾಧನಗಳ ಬಳಕೆಗೆ ಅನುಮತಿ ನೀಡಿಲ್ಲ ಎಂದು ಸರ್ಕಾರ ತನ್ನ ವರದಿಯಲ್ಲಿ ತಿಳಿಸಿದೆ.
ವಿಶೇಷವಾದ ಸಾಂಸ್ಕೃತಿಕ ಮತ್ತು ಧಾರ್ಮಿಕ ಚಟುವಟಿಕೆಗಳ ಸಂದರ್ಭದಲ್ಲಿ ಮಾತ್ರ ಧ್ವನಿವರ್ಧಕ ಮತ್ತು ಸಾರ್ವಜನಿಕರನ್ನು ಉದ್ದೇಶಿಸಲು ಬಳಸುವ ಸಾಧನಗಳ ಬಳಕೆಗೆ ರಾತ್ರಿ 10ರಿಂದ 12 ಗಂಟೆವರೆಗೆ 15 ದಿನಗಳಿಗೆ ಮೀರದಂತೆ ಅನುಮತಿ ನೀಡಬಹುದಾಗಿದೆ. ಮಸೀದಿ, ಚರ್ಚ್, ಗುರುದ್ವಾರ, ದೇವಸ್ಥಾನ ಸೇರಿದಂತೆ ಧಾರ್ಮಿಕ ಸ್ಥಳಗಳು, ಪಬ್ಸ್, ರೆಸ್ಟೋರೆಂಟ್ಸ್‌ಗಳಲ್ಲಿ ಧ್ವನಿವರ್ಧಕ ಬಳಕೆ ಮಾಡಲಾಗುತ್ತಿದೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಸರ್ಕಾರ ಪ್ರಸ್ತಾಪಿಸಿದೆ.
ಸರ್ಕಾರದ ಪರ ವಕೀಲರು ಹೈಕೋರ್ಟ್ನಲ್ಲಿ ವಾದಿಸುತ್ತಾ... ಶಬ್ದ ಮಾಲಿನ್ಯ ನಿಯಂತ್ರಣ ಕಾಯಿದೆ 2000ರ ನಿಯಮ 5, ಉಪ ನಿಯಮ 1ರ ಅಡಿ ಧ್ವನಿವರ್ಧಕ ಬಳಸಲು ಅನುಮತಿ ನೀಡಲಾಗಿದೆ. ವರ್ಷದಲ್ಲಿ ಒಮ್ಮೆ ರಾತ್ರಿ 10 ಗಂಟೆಯ ನಂತರ 12 ಗಂಟೆವರೆಗೆ ಧ್ವನಿವರ್ಧಕ ಬಳಸಲು ಅನುಮತಿ ಇರುತ್ತದೆ. ಅದು 15 ದಿನ ದಾಟುವಂತಿಲ್ಲ. ಬೆಳಗಿನ ಸಂದರ್ಭದಲ್ಲಿ ಶಬ್ದ, ಡೆಸಿಬಲ್ ಎಷ್ಟಿರಬೇಕು ಎಂಬುದರ ಕುರಿತು ಕಾನೂನಿನಲ್ಲಿ ಉಲ್ಲೇಖಿಸಲಾಗಿದೆ. ನಿಯಮ 2 ಮತ್ತು 3ರಲ್ಲಿ ರಾತ್ರಿ ವೇಳೆ ಧ್ವನಿವರ್ಧಕ ಬಳಕೆ 15 ದಿನ ದಾಟುವಂತಿಲ್ಲ ಎಂದು ಹೇಳಲಾಗಿದೆ. ರಾತ್ರಿ 10 ರಿಂದ 12 ಗಂಟೆವರೆಗೆ ಅನುಮತಿ ನೀಡಬಹುದಾಗಿದೆ ಎಂದು ನಿಯಮವಿದೆ ಎಂದು ತಿಳಿಸಿದರು.