ಕರ್ನಾಟಕ

karnataka

ETV Bharat / city

ತೃತೀಯ ಲಿಂಗಿಗಳಿಗೆ ಒಬಿಸಿ ಅಡಿ ಮೀಸಲು ನೀಡಲು ಚಿಂತನೆ: ಹೈಕೋರ್ಟ್​ಗೆ ಸರ್ಕಾರ ಮಾಹಿತಿ - ತೃತೀಯ ಲಿಂಗಿಗಳ ಅಪ್​ಡೇಟ್ ನ್ಯೂಸ್

ತೃತೀಯ ಲಿಂಗಿಗಳಿಗೆ ಇತರೆ ಹಿಂದುಳಿದ ವರ್ಗಗಳು (ಒಬಿಸಿ) ಕೆಟಗರಿ ಅಡಿಯಲ್ಲಿ ಮೀಸಲು ಕಲ್ಪಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ. ಅದಕ್ಕಾಗಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಜೊತೆ ಚರ್ಚಿಸಿದ ನಂತರವೇ ಕ್ರಮಕೈಗೊಳ್ಳಲಾಗುವುದು ಎಂದು ಸರ್ಕಾರ ತಿಳಿಸಿದೆ.

obc reservation to third gender
ತೃತೀಯ ಲಿಂಗಿಗಳಿಗೆ ಒಬಿಸಿ ಅಡಿ ಮೀಸಲು ನೀಡಲು ಚಿಂತನೆ

By

Published : Oct 4, 2020, 12:17 AM IST

ಬೆಂಗಳೂರು: ಸರ್ಕಾರಿ ನೇಮಕಾತಿಗಳಲ್ಲಿ ತೃತೀಯ ಲಿಂಗಿಗಳಿಗೆ ಇತರ ಹಿಂದುಳಿದ ವರ್ಗಗಳ (ಒಬಿಸಿ) ಅಡಿ ಮೀಸಲು ಕಲ್ಪಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಸರ್ಕಾರ ಹೈಕೋರ್ಟ್​ಗೆ ಮಾಹಿತಿ ನೀಡಿದೆ.

ರಾಜ್ಯ ವಿಶೇಷ ಮೀಸಲು ಕಾನ್ಸ್​​ಟೇಬಲ್ ಹುದ್ದೆಗಳ ನೇಮಕಾತಿಯಲ್ಲಿ ತೃತೀಯ ಲಿಂಗಿಗಳಿಗೆ ಅವಕಾಶ ಕಲ್ಪಿಸುತ್ತಿರುವ ಸರ್ಕಾರದ ಕ್ರಮ ಪ್ರಶ್ನಿಸಿ ಸಂಗಮ ಹೆಸರಿನ ಸ್ವಯಂ ಸೇವಾ ಸಂಸ್ಥೆ, ಹೈಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ. ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ನೇತೃತ್ವದ ವಿಭಾಗೀಯ ಪೀಠಕ್ಕೆ ಸರ್ಕಾರ ಈ ಮಾಹಿತಿ ನೀಡಿದೆ.

ಹೈಕೋರ್ಟ್

ಸರ್ಕಾರ ನ್ಯಾಯಾಲಯಕ್ಕೆ ಸಲ್ಲಿಸಿರುವ ಮಾಹಿತಿಯಲ್ಲಿ, ತೃತೀಯ ಲಿಂಗಿಗಳಿಗೆ ಇತರೆ ಹಿಂದುಳಿದ ವರ್ಗಗಳು (ಒಬಿಸಿ) ಕೆಟಗರಿ ಅಡಿಯಲ್ಲಿ ಮೀಸಲು ಕಲ್ಪಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ. ಅದಕ್ಕಾಗಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಜೊತೆ ಚರ್ಚಿಸಿದ ನಂತರವೇ ಕ್ರಮಕೈಗೊಳ್ಳಲಾಗುವುದು. ಆದರೆ, 2019ರ ಸೆಪ್ಟೆಂಬರ್ 21ಕ್ಕೆ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ಅವಧಿ ಮುಗಿದಿದೆ. ಹೊಸ ಅಧ್ಯಕ್ಷರು ಮತ್ತು ಸದಸ್ಯರು ನೇಮಕಗೊಂಡ ನಂತರ ಆಯೋಗದೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಬಹುದು. ಹೀಗಾಗಿ ಅಗತ್ಯ ತಿದ್ದುಪಡಿ ತರಲು ಮತ್ತಷ್ಟು ಕಾಲಾವಕಾಶ ನೀಡಬೇಕು ಎಂದು ಸರ್ಕಾರ ಮನವಿ ಮಾಡಿದೆ.

ಅಲ್ಲದೆ, ಹಿಂದುಳಿದ ವರ್ಗಗಳ ಪಟ್ಟಿ ಪರಿಷ್ಕರಿಸಬೇಕಾದರೆ ಹಾಗೂ ಒಬಿಸಿ ಅಡಿಯಲ್ಲಿ ಮೀಸಲು ಕಲ್ಪಿಸಬೇಕಿದ್ದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಕಾಯ್ದೆ ಪ್ರಕಾರ ಆಯೋಗದೊಂದಿಗೆ ಸಮಾಲೋಚನೆ ನಡೆಸುವುದು ಕಡ್ಡಾಯವಾಗಿದೆ. ಹಾಗೆಯೇ ಒಂದು ನೀತಿ ನಿರ್ಣಯ ವಿಷಯವಾಗಿದೆ ಎಂದು ತನ್ನ ಲಿಖಿತ ಮಾಹಿತಿಯಲ್ಲಿ ತಿಳಿಸಿದೆ. ಸರ್ಕಾರದ ಮಾಹಿತಿಗೆ ಪ್ರತಿಕ್ರಿಯಿಸಿರುವ ಪೀಠ, ಸರ್ಕಾರ ನಿಜವಾಗಿಯೂ ತೃತೀಯ ಲಿಂಗಿಗಳಿಗೆ ಒಬಿಸಿ ಅಡಿಯಲ್ಲಿ ಮೀಸಲು ಕಲ್ಪಿಸಲಿದೆಯೇ? ಆಯೋಗ ರಚನೆಯಾದ ಬಳಿಕ ಸಂವಿಧಾನದ ವಿಧಿ 342 ಎ ಅನುಸಾರ ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಪಟ್ಟಿಗೆ ತೃತೀಯ ಲಿಂಗಿಗಳನ್ನು ಸೇರಿಸಲು ಯಾವ ರೀತಿ ಕಾರ್ಯನಿರ್ವಹಿಸಲಿದೆ ಎಂಬುದರ ಕುರಿತು ಸರ್ಕಾರ ವಿವರಣೆ ನೀಡಬೇಕು ಎಂದು ಸೂಚಿಸಿ, ವಿಚಾರಣೆಯನ್ನು ಅಕ್ಟೋಬರ್ 19ಕ್ಕೆ ಮುಂದೂಡಿದೆ.

ABOUT THE AUTHOR

...view details