ಬೆಂಗಳೂರು:ಮೇಕದಾಟು ಯೋಜನೆಗೆ ಆಗ್ರಹಿಸಿ ಇಂದಿನಿಂದ 10 ದಿನಗಳ ಕಾಲ ನಡೆಯಲಿರುವ ಕಾಂಗ್ರೆಸ್ ಪಾದಯಾತ್ರೆ ತಡೆಗೆ ಮುಂದಾಗದ ಸರ್ಕಾರ, ಕಾನೂನು ರೀತಿ ಕ್ರಮ ಕೈಗೊಳ್ಳುವ ಅಧಿಕಾರವನ್ನು ಜಿಲ್ಲಾಡಳಿತಕ್ಕೆ ನೀಡಿದೆ. ರಾಜಕೀಯವಾಗಿ ಪಾದಯಾತ್ರೆ ಎದುರಿಸುವ ಟಾಸ್ಕ್ಅನ್ನು ಬೆಂಗಳೂರು ಸಚಿವರಿಗೆ ನೀಡಿದೆ.
ರೇಸ್ ಕೋರ್ಸ್ ರಸ್ತೆಯಲ್ಲಿರುವ ಅಧಿಕೃತ ನಿವಾಸ ರೇಸ್ ವ್ಯೂ ಕಾಟೇಜ್ನಲ್ಲಿ ಸಿಎಂ ಬೊಮ್ಮಾಯಿ ಅವರು ಬೆಂಗಳೂರು ಸಚಿವರ ಸಭೆ ನಡೆಸಿದರು. ಗೃಹ ಸಚಿವ ಆರಗ ಜ್ಞಾನೇಂದ್ರ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಸಚಿವರಾದ ಅಶ್ವತ್ಥ ನಾರಾಯಣ್, ಸುಧಾಕರ್, ಬಿಜೆಪಿ ನಾಯಕ ಅರವಿಂದ ಲಿಂಬಾವಳಿ ಜೊತೆ ಕಾಂಗ್ರೆಸ್ ಪಾದಯಾತ್ರೆ ವಿಷಯವನ್ನು ಕೇಂದ್ರೀಕರಿಸಿಕೊಂಡು ಸತತವಾಗಿ ಎರಡು ಗಂಟೆಗಳ ಕಾಲ ಸುದೀರ್ಘವಾದ ಸಮಾಲೋಚನೆ ನಡೆಸಿ ಸಚಿವರ, ನಾಯಕರ ಅಭಿಪ್ರಾಯ ಸಂಗ್ರಹಿಸಿ, ಸಲಹೆಗಳನ್ನು ಆಲಿಸಿದರು.
ಈಗಾಗಲೇ ಆರಂಭವಾಗಿರುವ ಪಾದಯಾತ್ರೆಯನ್ನು ತಡೆಯುವುದರಿಂದ ಕಾಂಗ್ರೆಸ್ಗೆ ಹೆಚ್ಚಿನ ಲಾಭವಾಗಲಿದೆ. ಹಾಗಾಗಿ ಬಲವಂತದಿಂದ ಪೊಲೀಸ್ ಅಸ್ತ್ರ ಬಳಸಿ ಪಾದಯಾತ್ರೆ ತಡೆಯುವ ಪ್ರಯತ್ನಕ್ಕೆ ಕೈಹಾಕದೆ ಕಾನೂನು ರೀತಿ ಕ್ರಮಕ್ಕೆ ಮುಂದಾಗಬೇಕು ಎಂದು ಸಚಿವರು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಹಕ್ಕುಚ್ಯುತಿ ಸಾಧ್ಯತೆ ಬಗ್ಗೆಯೂ ಚರ್ಚಿಸಿದರು.