ಕರ್ನಾಟಕ

karnataka

ETV Bharat / city

ಮಂದಗತಿಯಲ್ಲಿ ಬಾಹ್ಯಾನುದಾನಿತ ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ

2021-22 ಸಾಲಿನ ಮೊದಲಾರ್ಧ ವರ್ಷ ಮುಗಿದಿದ್ದು, ಹಲವು ಸರ್ಕಾರದ ಹಲವು ಯೋಜನೆಗಳ ಪ್ರಗತಿ ತನ್ನ ವೇಗ ಕಳೆದುಕೊಂಡಿದೆ.‌ ಅದರಲ್ಲೂ ಬಾಹ್ಯಾನುದಾನಿತ ಯೋಜನೆಗಳು ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿಯೂ ಕುಂಠಿತವಾಗಿದೆ.

ವಿಧಾನಸೌಧ
ವಿಧಾನಸೌಧ

By

Published : Nov 15, 2021, 7:44 AM IST

ಬೆಂಗಳೂರು: ಆರ್ಥಿಕ ಸಂಕಷ್ಟದಿಂದಾಗಿ ರಾಜ್ಯ ಸರ್ಕಾರ ಯೋಜನೆಗಳಿಗೆ ಅಳೆದು ತೂಗಿ ಹಣ ಬಿಡುಗಡೆ ಮಾಡುತ್ತಿದೆ. ಇತ್ತ ಹಲವು ಯೋಜನೆಗಳ ಪ್ರಗತಿ ಮಂದಗತಿಯಲ್ಲಿ ಸಾಗುತ್ತಿದ್ದು, ಪ್ರಮುಖವಾಗಿ ಬಾಹ್ಯಾನುದಾನಿತ ಯೋಜನೆಗಳು (External funded projects) ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳ (Central Award schemes ) ಅನುಷ್ಠಾನದ ಪ್ರಗತಿಗೆ ಬ್ರೇಕ್ ಬಿದ್ದಂತಾಗಿದೆ.

ಕೋವಿಡ್ ಮಹಾಮಾರಿ ಹಾಗೂ ಆರ್ಥಿಕ ಸಂಕಷ್ಟದ ಮಧ್ಯೆ ರಾಜ್ಯ ಸರ್ಕಾರಕ್ಕೆ ಹಣಕಾಸು ನಿರ್ವಹಣೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪ್ರಮುಖ ಯೋಜನೆಗಳ ಅನುಷ್ಠಾನಕ್ಕಾಗಿ ಹಣ ಹೊಂದಾಣಿಕೆಗೂ ಕಸರತ್ತು ನಡೆಸುತ್ತಿದೆ. ಕೆಲ ಪ್ರಮುಖ ಯೋಜನೆಗಳ ಪ್ರಗತಿ ಆಮೆಗತಿಯಲ್ಲಿ ನಡೆಯುತ್ತಿದೆ. 2021-22 ಸಾಲಿನ ಮೊದಲಾರ್ಧ ವರ್ಷ ಮುಗಿದಿದ್ದು, ಹಲವು ಯೋಜನೆಗಳ ಪ್ರಗತಿ ತನ್ನ ವೇಗ ಕಳೆದುಕೊಂಡಿದೆ.‌ ಅದರಲ್ಲೂ ಬಾಹ್ಯಾನುದಾನಿತ ಯೋಜನೆಗಳು ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿಯೂ ಕುಂಠಿತವಾಗಿದೆ.

ಬಾಹ್ಯಾನುದಾನಿತ ಯೋಜನೆ ಪ್ರಗತಿ ಹೇಗಿದೆ?:

ಬಾಹ್ಯಾನುದಾನಿತ ಯೋಜನೆಯಡಿ ಮೊದಲಾರ್ಧ ವರ್ಷದಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ. ಲೋಕೋಪಯೋಗಿ ಇಲಾಖೆಯಡಿ ಬಾಹ್ಯಾನುದಾನಿತ ಯೋಜನೆಯಾದ ಕೆ-ಶಿಪ್​ನ ಈವರೆಗಿನ ಪ್ರಗತಿ ಕೇವಲ 22.08% . ಇನ್ನು ನಗರಾಭಿವೃದ್ಧಿ ಇಲಾಖೆಯಲ್ಲಿ ಬರುವ ವಿವಿಧ ಬಾಹ್ಯಾನುದಾನಿತ ಯೋಜನೆಯಲ್ಲಿ ಕೇವಲ ಶೇ 41ರಷ್ಟು ಪ್ರಗತಿ ಸಾಧಿಸಲಾಗಿದೆ.

ಇಂಧನ ಇಲಾಖೆಯಡಿ ಬಾಹ್ಯಾನುದಾನಿತ ಬೆಂಗಳೂರು ಸ್ಮಾರ್ಟ್ ಎನರ್ಜಿ ಎಫಿಶಿಯಂಟ್ ಪವರ್ ಡಿಸ್ಟ್ರಿಬ್ಯೂಶನ್ ಪ್ರಾಜೆಕ್ಟ್ ಶೂನ್ಯ ಪ್ರಗತಿ ಸಾಧಿಸಿದೆ. ಮತ್ತು ಜಲಸಂಪನ್ಮೂಲ ಇಲಾಖೆಯಲ್ಲಿನ ವಿವಿಧ ಬಾಹ್ಯಾನುದಾನಿತ ಯೋಜನೆಗಳ ಪ್ರಗತಿ ಶೇ 16.86ರಷ್ಟು ಮಾತ್ರ ಆಗಿದೆ.

ಬಾಹ್ಯಾನುದಾನಿತ ಯೋಜನೆಯಡಿ ಒಟ್ಟು 3092.94 ಕೋಟಿ ರೂ. ಅನುದಾನ ಹಂಚಿಕೆಯಾಗಿದೆ. ಬಿಡುಗಡೆಯಾಗಿರುವುದು ಕೇವಲ 850.89 ಕೋಟಿ ರೂ. ಮಾತ್ರ. ಒಟ್ಟು ಬಾಹ್ಯಾನುದಾನಿತ ಯೋಜನೆಗಳ ಪ್ರಗತಿ ಸಾಧನೆ ಒಟ್ಟು ಅನುದಾನದ ಮುಂದೆ ಕೇವಲ ಶೇ 31.80ರಷ್ಟು ಮಾತ್ರ ಆಗಿದೆ.

ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕಡಿಮೆ ಅನುದಾನ ಬಿಡುಗಡೆ:

ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಕಡಿಮೆ ಅನುದಾನ ಬಿಡುಗಡೆಯಾಗಿದೆ. ಹಲವು ಯೋಜನೆಗಳಿಗೆ ಶೇ 40ಕ್ಕೂ ಕಡಿಮೆ ಅನುದಾನ ಬಿಡುಗಡೆಯಾಗಿದೆ.

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಗೆ (Pradhan Mantri Gram Sadak Yojana) ಕೇಂದ್ರ ಸರ್ಕಾರ ಕೇವಲ 21.25ರಷ್ಟು, ಸ್ವಚ್ಛ ಭಾರತ (ಗ್ರಾಮೀಣ)ಕ್ಕೆ 0%, ರಾಷ್ಟ್ರೀಯ ಆರೋಗ್ಯ ಅಭಿಯಾನ 37.34%, ಕುಟುಂಬ ಕಲ್ಯಾಣ 41.73%, ಸಮಗ್ರ ಶಿಕ್ಷಣ ಕರ್ನಾಟಕಕ್ಕೆ 23.42%, ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮಕ್ಕೆ 20.84%, ಪ್ರಧಾನ ಮಂತ್ರಿ ಆವಾಸ್​ ಯೋಜನೆ (ನಗರ)ಗೆ 21.31ರಷ್ಟು, ಪ್ರಧಾನ ಮಂತ್ರಿ ಆವಾಸ್​ ಯೋಜನೆ (ಗ್ರಾಮೀಣ)ಗೆ 0%, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಗೆ 37.40%, ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ ಈವರೆಗೆ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ.

ಕಳಪೆ ಪ್ರಗತಿ ಸಾಧಿಸಿದ ಯೋಜನೆಗಳು:

ಶೇ 15ಕ್ಕಿಂತಲೂ ಕಡಿಮೆ ವೆಚ್ಚ ಮಾಡಿ ಕಳಪೆ ಪ್ರಗತಿ ಸಾಧಿಸಿದ ಯೋಜನೆಗಳ ಬಗ್ಗೆ ಇತ್ತೀಚೆಗೆ ನಡೆದ ಕೆಡಿಪಿ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಲಾಗಿದೆ. ಅದರಲ್ಲಿ ಪ್ರಮುಖವಾಗಿ ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಪ್ರಧಾನ ಮಂತ್ರಿ ಆವಾಸ್​ ಯೋಜನೆ (ಗ್ರಾಮೀಣ), ಜಲಜೀವನ್ ಮಿಷನ್, ಗ್ರಾಮೀಣ ಸಡಕ್ ಯೋಜನೆ, ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳು ಕಳಪೆ ಪ್ರಗತಿ ಸಾಧಿಸಿದೆ.

ABOUT THE AUTHOR

...view details