ಬೆಂಗಳೂರು: ಸರ್ಕಾರಿ ಕಾಲೇಜುಗಳು ಎಲ್ಲ ಅಗತ್ಯ ಮೂಲ ಸೌಲಭ್ಯಗಳಿಂದ ಕೂಡಿದ್ದು, ಸುಸಜ್ಜಿತವಾಗಿವೆ. ಪ್ರತಿಯೊಂದು ಕಾಲೇಜಿನಲ್ಲೂ ಕನಿಷ್ಠ ಪಕ್ಷ 1,500 ರಿಂದ 2,000 ವಿದ್ಯಾರ್ಥಿಗಳ ದಾಖಲಾತಿ ಇರುವಂತೆ ನೋಡಿಕೊಳ್ಳಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಸರ್ಕಾರಿ ಕಾಲೇಜುಗಳ ಪ್ರಾಂಶುಪಾಲರುಗಳಿಗೆ ತಾಕೀತು ಮಾಡಿದ್ದಾರೆ.
ಉನ್ನತ ಶಿಕ್ಷಣ ಇಲಾಖೆ ವತಿಯಿಂದ ಇದೇ ಪ್ರಥಮ ಸಲ ಏರ್ಪಡಿಸಿದ್ದ, ರಾಜ್ಯದ ಎಲ್ಲ ಸರ್ಕಾರಿ ಪ್ರಥಮ ದರ್ಜೆ, ಇಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಕಾಲೇಜುಗಳ ಪ್ರಾಂಶುಪಾಲರುಗಳ ಕಾರ್ಯಾಗಾರವನ್ನು ಉದ್ದೇಶಿಸಿ ಅವರು ಶುಕ್ರವಾರ ಮಾತನಾಡಿದರು. ಸದ್ಯ ಕೇವಲ 84 ಸರ್ಕಾರಿ ಕಾಲೇಜುಗಳಲ್ಲಿ ಮಾತ್ರ ಶೇ.100ರಷ್ಟು ವಿದ್ಯಾರ್ಥಿಗಳು ಇದ್ದಾರೆ. 105 ಸರ್ಕಾರಿ ಕಾಲೇಜುಗಳಲ್ಲಿ ಒಟ್ಟು ಸಾಮರ್ಥ್ಯದ ಶೇ.40ರಷ್ಟು ವಿದ್ಯಾರ್ಥಿಗಳು ಮಾತ್ರ ಇದ್ದಾರೆ. ಈ ದುರವಸ್ಥೆ ತಪ್ಪಿ, ಸರ್ಕಾರಿ ಕಾಲೇಜುಗಳು ಕಲಿಕೆಗೆ ಆಕರ್ಷಕ ತಾಣಗಳಾಗಬೇಕು ಎಂದು ಅವರು ಹೇಳಿದರು.
ಸೂಕ್ತ ಪಠ್ಯ ಅಳವಡಿಕೆ:ಕಾಲೇಜುಗಳಲ್ಲಿ ಶುಲ್ಕದ ರೂಪದಲ್ಲಿ ಸಂಗ್ರಹವಾಗುತ್ತಿರುವ ಹಣವನ್ನು ಈಗ ಆಯಾ ಕಾಲೇಜುಗಳ ಅಭಿವೃದ್ಧಿಗೆ ಕೊಡಲಾಗುತ್ತಿದೆ. ಈ ಮೂಲಕ ಸ್ವಾವಲಂಬನೆ ಮತ್ತು ಸ್ವಾಯತ್ತೆ ಒದಗಿಸಲಾಗುತ್ತಿದೆ. ಸರ್ಕಾರಿ ಕಾಲೇಜುಗಳಲ್ಲಿ ಕಲಿಯಲು ಬರುವವರು ಆರ್ಥಿಕ ದುರ್ಬಲ ಕುಟುಂಬಗಳ ಮಕ್ಕಳಾಗಿರುತ್ತಾರೆ. ಇವರಿಗೆಲ್ಲ ಉದ್ಯೋಗ ಸಿಗುವಂತೆ ಮಾಡಬೇಕು. ಇದಕ್ಕಾಗಿ ಅಗತ್ಯ ಕೌಶಲ್ಯ ಕಲಿಕೆ ಮತ್ತು ಸೂಕ್ತ ಪಠ್ಯ ಅಳವಡಿಸಿಕೊಳ್ಳಲಾಗಿದೆ ಎಂದು ಸಚಿವರು ಹೇಳಿದರು.
ಪ್ರತಿಯೊಂದು ಸರ್ಕಾರಿ ಕಾಲೇಜಿನಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಬೇಕು. ಹಬ್ಬದ ವಾತಾವರಣ ಪಸರಿಸಬೇಕು. ಇದಕ್ಕೆ ವ್ಯಾಪ್ತಿಯಲ್ಲೇ ಯೋಜನೆಗಳನ್ನು ರೂಪಿಸಬೇಕು ಎಂದು ಅವರು ಸೂಚಿಸಿದರು.