ಬೆಂಗಳೂರು: ಕೋವಿಡ್-19 ಕರ್ತವ್ಯದಲ್ಲಿ ನಿಯೋಜನೆಗೊಂಡ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿ ಮತ್ತು ನೌಕರರು ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಯನ್ನು ಕೊರೊನಾ ವಾರಿಯರ್ಸ್ ಎಂದು ಗುರುತಿಸಿ ಸರ್ಕಾರ ಆದೇಶ ಹೊರಡಿಸಿದೆ.
ಕೋವಿಡ್ ನಿರ್ವಹಣೆಯ ಕರ್ತವ್ಯಗಳಲ್ಲಿ ನಿಯೋಜನೆಗೊಂಡ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಅಧಿಕಾರಿ ಮತ್ತು ನೌಕರರನ್ನು ಆಯಾ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಕೊರೊನಾ ವಾರಿಯರ್ಸ್ ಎಂದು ಗುರುತಿಸಬೇಕೆಂದು ಆದೇಶಿಸಲಾಗಿದೆ.
ಕೋವಿಡ್ ಕರ್ತವ್ಯಕ್ಕೆ ಗ್ರಾಮ ಪಂಚಾಯಿತಿಗಳಿಂದ ನಿಯೋಜಿತ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಕೊರೊನಾದಿಂದ ಮರಣ ಹೊಂದಿದಲ್ಲಿ ಅವರ ಕುಟುಂಬದವರಿಗೆ ಪರಿಹಾರ ನೀಡಲು ಅಥವಾ ಚಿಕಿತ್ಸೆಗೆ ತಗುಲುವ ವೈದ್ಯಕೀಯ ವೆಚ್ಚ ಭರಿಸಲು ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಸ್ಥಾಪಿಸಲಾಗುವ ಜಿಲ್ಲಾ ಪಂಚಾಯಿತಿ ಆಶ್ವಾಸನೆ ನಿಧಿಯಂತೆ ಪರಿಹಾರ ಮೊತ್ತ ಪಡೆಯಲು ಅರ್ಹರಿರುತ್ತಾರೆ.
ಅಧಿಕಾರಿಗಳು ಹಾಗೂ ನೌಕರರು ಗರಿಷ್ಠ 14 ದಿನಗಳ ವಿಶೇಷ ರಜೆಯನ್ನು ಪಡೆಯಲು ಅರ್ಹರಿರುತ್ತಾರೆ. ಈ ಆದೇಶ ಏಪ್ರಿಲ್ 1, 2020 ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಇದನ್ನೂ ಓದಿ:ಸಂಗೀತ ವಿವಿ ಕುಲಪತಿ ಆಯ್ಕೆ ವಿವಾದ: ದಾಖಲೆ ಹಾಜರುಪಡಿಸಲು ಹೈಕೋರ್ಟ್ ನಿರ್ದೇಶನ