ಕರ್ನಾಟಕ

karnataka

ETV Bharat / city

ಕೊರೊನಾಗೆ ಆಯುರ್ವೇದ ಔಷಧಿ ಬಳಸಿ, ಗುಟ್ಕಾ ನಿಷೇಧಿಸಿ: ಸರ್ಕಾರಕ್ಕೆ ರಾಜ್ಯಪಾಲರ ಸಲಹೆ

ಇಂದು ಸಿಎಂ ಬಿಎಸ್​ವೈ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ರಾಜಭವನಕ್ಕೆ ಭೇಟಿ ನೀಡಿ ರಾಜ್ಯಪಾಲ ವಜುಭಾಯ್​​ ವಾಲಾ ಅವರ ಜೊತೆ ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿ ಕುರಿತು ಚರ್ಚೆ ನಡೆಸಿದ್ದಾರೆ.

Governor vajubhai vala suggests govt to ban Gutka
ರಾಜ್ಯಪಾಲರನ್ನು ಭೇಟಿ ಮಾಡಿದ ಸಿಎಂ ಬಿಎಸ್​ವೈ

By

Published : Jul 31, 2020, 3:43 PM IST

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ನಿಯಂತ್ರಣಕ್ಕೆ ಆಯುರ್ವೇದ ಮತ್ತು ಹೋಮಿಯೋಪತಿ ಔಷಧ ಬಳಸುವಂತೆ ಹಾಗೂ ಗುಟ್ಕಾ-ತಂಬಾಕು ಉತ್ಪನ್ನಗಳನ್ನು ನಿಷೇಧಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ರಾಜ್ಯಪಾಲ ವಜುಭಾಯ್​ ವಾಲಾಸಲಹೆ ನೀಡಿದ್ದಾರೆ.

ರಾಜ್ಯಪಾಲರ ನಿರ್ದೇಶನದ ಮೇರೆಗೆ ರಾಜಭವನಕ್ಕೆ ಭೇಟಿ ನೀಡಿದ ಸಿಎಂ ಬಿಎಸ್​ವೈ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ, ವಜುಭಾಯ್​​ ವಾಲಾರ ಜೊತೆ ಕೆಲ ಕಾಲ ಮಾತುಕತೆ ನಡೆಸಿದರು. ಈವರೆಗೂ ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳು, ಕೋವಿಡ್ ತಪಾಸಣೆ, ಸೋಂಕಿತರಿಗೆ ಚಿಕಿತ್ಸೆ ನೀಡುವುದು ಸೇರಿದಂತೆ ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿ ಕುರಿತು ರಾಜ್ಯಪಾಲರಿಗೆ ಮಾಹಿತಿ ನೀಡಿದರು.

ಸರ್ಕಾರದ ವಿವರಣೆ ಆಲಿಸಿದ ರಾಜ್ಯಪಾಲರು, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಸಾಕಷ್ಟು ಹೆಚ್ಚಳವಾಗುತ್ತಿದೆ. ಕೂಡಲೇ ಹೆಚ್ಚು ಹೆಚ್ಚು ಪರೀಕ್ಷೆಗಳನ್ನು ನಡೆಸಲು ವ್ಯವಸ್ಥೆ ಮಾಡಿಕೊಳ್ಳಿ. ಆಯುರ್ವೇದ ಔಷಧಿ ಹಾಗೂ ಹೋಮಿಯೋಪತಿ ಔಷಧಿಯನ್ನು ಸೋಂಕು ಪೀಡಿತ ಪ್ರದೇಶಗಳಲ್ಲಿ ನಿಯಂತ್ರಣಕ್ಕಾಗಿ ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.

ರಾಜ್ಯದಲ್ಲಿ ತಂಬಾಕು, ಗುಟ್ಕಾ, ಪಾನ್ ಮಸಾಲದಂತಹ ಉತ್ಪನ್ನಗಳ ಮಾರಾಟ ಮತ್ತು ವಿತರಣೆಯನ್ನು ನಿಷೇಧಿಸುವಂತೆ ಕೂಡ ರಾಜ್ಯಪಾಲರು ಸಲಹೆ ನೀಡಿದರು. ಈ ಉತ್ಪನ್ನಗಳಿಗೆ ರಾಜ್ಯದ ಯುವ ಸಮೂಹ ಹಾಗೂ ವಿದ್ಯಾರ್ಥಿಗಳು ದಾಸರಾಗಿ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ನಿಷೇಧ ಸೂಕ್ತ ಎಂದು ಅಭಿಪ್ರಾಯಪಟ್ಟರು.

ರಾಜ್ಯಪಾಲರ ಸಲಹೆಗೆ ಪ್ರತಿಕ್ರಿಯೆ ನೀಡಿದ ಸಿಎಂ, ಈ ಬಗ್ಗೆ ಈಗಾಗಲೇ ಚರ್ಚೆ ನಡೆಸಲಾಗುತ್ತಿದೆ. ಆದಷ್ಟು ಬೇಗ ಕ್ರಮ ಕೈಗೊಳ್ಳಲಾಗುತ್ತದೆ. ಅಗತ್ಯಬಿದ್ದರೆ ಸುಗ್ರೀವಾಜ್ಞೆ ಜಾರಿಗೊಳಿಸಿಯಾದರೂ ಗುಟ್ಕಾ ಹಾಗೂ ತಂಬಾಕು ವಿತರಣೆ ಮತ್ತು ಮಾರಾಟಕ್ಕೆ ತಡೆ ನೀಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ABOUT THE AUTHOR

...view details