ಬೆಂಗಳೂರು: ರಾಜ್ಯದ ನೂತನ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿರುವ ಥಾವರ್ ಚಂದ್ ಗೆಹ್ಲೋಟ್ ದಿಢೀರ್ ನವದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳ ನಡುವೆ ಗವರ್ನರ್ ಪ್ರವಾಸ ಸಾಕಷ್ಟು ಕುತೂಹಲ ಮೂಡುವಂತೆ ಮಾಡಿದೆ.
ಜುಲೈ 11 ರಂದು ರಾಜ್ಯದ ನೂತನ ರಾಜ್ಯಪಾಲರಾಗಿ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರತಿಜ್ಞಾವಿಧಿ ಸ್ವೀಕರಿಸಿದ್ದು, ಒಂದು ವಾರ ನಿರಂತರವಾಗಿ ಆಡಳಿತ ಮತ್ತು ಪ್ರತಿಪಕ್ಷ ನಾಯಕರ ಭೇಟಿಗೆ ಸಮಯಾವಕಾಶ ನೀಡಿದ್ದರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಿರಿಯ ಸಚಿವರು, ಪ್ರತಿಪಕ್ಷ ನಾಯಕರು ರಾಜಭವನಕ್ಕೆ ಭೇಟಿ ನೀಡಿ ರಾಜ್ಯಪಾಲರಿಗೆ ಶುಭ ಕೋರಿದ್ದರು.
ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿ ಎಂಟು ದಿನಗಳಲ್ಲೇ ಗೆಹ್ಲೋಟ್ ನವದೆಹಲಿಗೆ ತೆರಳಿದ್ದಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದ್ದು, ರಾಜ್ಯ ಸರ್ಕಾರದ ಎರಡು ವರ್ಷದ ಸಾಧನಾ ಸಮಾರಂಭಕ್ಕೆ ಸಿದ್ಧತೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ರಾಜ್ಯಪಾಲರು ದೆಹಲಿಗೆ ತೆರಳಿರುವುದು ಬಿಜೆಪಿ ನಾಯಕರಲ್ಲಿ ಕುತೂಹಲ ಮೂಡುವಂತೆ ಮಾಡಿದೆ.
ಸಿಎಂ ರಾಜೀನಾಮೆ ನೀಡಿದ್ರೆ, ಅದರ ಅಂಗೀಕಾರ ಕುರಿತು ಮಾಹಿತಿ ಪಡೆದುಕೊಳ್ಳಲು ರಾಜ್ಯಪಾಲರು ದೆಹಲಿಗೆ ಹೋಗಿರಬಹುದು. ಇಲ್ಲವೇ ರಾಜ್ಯಪಾಲರಿಗೆ ಕೆಲವೊಂದು ಮಾಹಿತಿ ನೀಡಲು ಕರೆಸಿಕೊಳ್ಳಲಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ:ಸಿಎಂ ಸ್ಥಾನ ಬದಲಾವಣೆ ಮಾಡಿದರೆ ಬಿಜೆಪಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತೆ: ರಂಭಾಪುರಿ ಶ್ರೀ